ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ವಿಧಾನಸಭೆಯಲ್ಲಿನ ವಿಶ್ವಾಸಮತದಲ್ಲಿ ಗೆಲುವಾಗಿದೆ. ರಾಜಸ್ಥಾನದಲ್ಲಿನ ಈ ‘ರಾಜಕೀಯ ಡ್ರಾಮ’ ಸದ್ಯಕ್ಕೆ ಅಂತ್ಯ ಕಂಡಿದ್ದರೂ, ಇದು ಸಂಪೂರ್ಣ ಅಂತ್ಯ ಕಂಡಿದೆ ಎಂದು ಹೇಳುವುದು ಆತುರವಾದೀತು. ಯಾಕೆಂದರೆ ಗೆಹ್ಲೋಟ್-ಪೈಲೆಟ್ ‘ಕೈ’ ಮಿಲಾಯಿಸಿದ್ದರೂ ಹೃದಯ ಇನ್ನೂ ಹತ್ತಿರವಾಗಿಲ್ಲ.
ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಮತ್ತು ಇತರೆ 18 ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಗೆ ವಾಪಸ್ ಆದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್ ವಿಶ್ವಾಸ ಮತ ಯಾಚಿಸಿದರು. ವಿಶ್ವಾಸಮತ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್, ರಾಜಸ್ಥಾನದ ಜನರ ಹಿತ ಕಾಯಲು ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಾಜಕೀಯ ಅನಿಶ್ಚಿತತೆತಯಿಂದಾಗಿ ರಾಜಸ್ಥಾನ ಸರಕಾರವು ತೂಗುಯ್ಯಾಲೆಯಲ್ಲಿತ್ತು. ಅಧಿಕಾರಕ್ಕಾಗಿ ನಡೆದ ಹಗ್ಗಜಗ್ಗಾಟದಲ್ಲಿ ರಾಜಕೀಯ ಪರಿಸ್ಥಿತಿ ಬಿಗಡಾಯಿಸಿ ಸರ್ಕಾರ ಪತನದ ಅಂಚಿಗೆ ಬಂದಿತ್ತು. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ವಿಶ್ವಾಸ ಮತ ಯಾಚನೆ ವೇಳೆ ಸಾಧಿಸಿದ ಗೆಲುವಿನಿಂದಾಗಿ ಇದೀಗ ಸರ್ಕಾರವು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದೆ.
ಪ್ರಶ್ನೋತ್ತರದ ಬಳಿಕ ಸದನವು ಸರಕಾರದ ವಿಶ್ವಾಸಮತ ಪ್ರಸ್ತಾಪವನ್ನು ಧ್ವನಿಮತದ ಮೂಲಕ ಸ್ವೀಕರಿಸಿತು.
ಇದಕ್ಕೂ ಮುನ್ನ ಬೆಳಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಕುಮಾರ್ ಧರಿವಾಲ್ ಸದನದಲ್ಲಿ ಮಂಡಿಸಿದರು.