ಯಡಿಯೂರಪ್ಪ ಪದಚ್ಯುತಿಗೆ ಕಸರತ್ತು! ಯತ್ನಾಳ್ ಬೆನ್ನಿಗೆ ಹೈಕಮಾಂಡ್?

Prasthutha|

-ಎನ್.ರವಿಕುಮಾರ್

- Advertisement -

 ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಕ್ಷತ್ರಿಕನ ಕಾಟ ತಪ್ಪಿದಂತಿಲ್ಲ. ಬಿಜೆಪಿಯ ಹಿರಿಯ ನಾಯಕ ಬಸವನಗೌಡ ಪಾಟೀಲ್‌ ಯತ್ನಾಳ್ ಪಕ್ಷದ ಷೋ ಕಾಸ್ ನೋಟೀಸ್‌ ಗೆ ಕ್ಯಾರೆ ಎನ್ನದೆ ಯಡಿಯೂರಪ್ಪ, ಮತ್ತವರ ಕುಟುಂಬದವರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ಮುಂದುವರೆಸಿದ್ದಾರೆ. ಅಸಲಿಗೆ ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರಕ್ಕೆ ಯತ್ನಾಳ್ ಅವರೇ ಅಧಿಕತ ವಿಪಕ್ಷದಂತೆ ಕಾಡತೊಡಗಿದ್ದಾರೆ. 2008ರಲ್ಲಿ ಆಪರೇಶನ್ ಕಮಲ ಮೂಲಕವೇ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಸ್ವಪಕ್ಷೀಯರ ವಿರೋಧ ಕಟ್ಟಿಕೊಂಡಿದ್ದೇ ತಮ್ಮ ಕುಟುಂಬ ಸದಸ್ಯರ, ಆಪ್ತೇಷ್ಠರ ವಿಪರೀತ ಹಸ್ತಕ್ಷೇಪದಿಂದ ಶಾಸಕರು, ಸಚಿವರುಗಳಿಂದ. ಸಚಿವೆ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರುಗಳೇ ಛಾಯಾ ಮುಖ್ಯಮಂತ್ರಿಗಳಂತೆ ದರ್ಬಾರು ನಡೆಸಿದ್ದು ಹೈಕಮಾಂಡ್ ವರೆಗೂ ದೂರು ತಲುಪುವಂತಾಯಿತು, ಕೊನೆಗದು ಯಡಿಯೂರಪ್ಪ ಅವರ ಸಂಪುಟ ಸಚಿವರುಗಳೇ ಡಿನೋಟಿಫೀಕೇಶನ್, ಗಣಿ ಹಗರಣಗಳ ದಾಖಲೆಗಳನ್ನು ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಸೇರುವಂತೆ ಮಾಡಿ ಲೋಕಾಯುಕ್ತದಲ್ಲಿ ಕೇಸು ದಾಖಲಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಜೈಲು ಸೇರಬೇಕಾದ ಸ್ಥಿತಿಯನ್ನು ಇಡೀ ಭಾರತವೇ ನೋಡುವಂತಾಯಿತು.

ಅವತ್ತಿನ ಬಿಜೆಪಿ ಆಡಳಿತ ಮೂವರು ಮುಖ್ಯಮಂತ್ರಿಗಳೊಂದಿಗೆ ಮುಕ್ತಾಯಗೊಂಡಿತ್ತಾದರೂ 2019ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಅಂತಹುದ್ದೇ ಸಮಸ್ಯೆಗಳನ್ನು, ಆಂತರಿಕ ಕಿತ್ತಾಟಗಳನ್ನು ಕಂಡು ಬಸವಳಿಯುತ್ತಿದೆ. ಅಧಿಕಾರಕ್ಕೆ ಬಂದ ಆರಂಭದಿಂದಲೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ಶಾಸಕರನ್ನು ಸಮಾಧಾನ ಪಡಿಸಲು ಯಡಿಯೂರಪ್ಪ ಹೆಣಗಾಡುತ್ತಲೆ ಇದ್ದಾರೆ. ಆಪರೇಶನ್ ಕಮಲ ನಡೆಸಿ ಪಕ್ಷವನ್ನು ಅಧಿಕಾರದ ಸನಿಹಕ್ಕೆ ತಂದರೂ ಪ್ರಮಾಣ ವಚನ ಸ್ವೀಕರಿಸಲು ಪಕ್ಷದ ಹೈಕಮಾಂಡ್ ಅಷ್ಟು ಸುಲಭವಾಗಿ ಅವಕಾಶ ಕೊಡಲಿಲ್ಲ. ಯಡಿಯೂರಪ್ಪ ಎಂಬ ಹಠಮಾರಿ ನಾಯಕನನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಕಾರಣದಿಂದಲೇ ಹೈಕಮಾಂಡ್ ಇಂತಹ ವಿಳಂಬ ಧೋರಣೆಯನ್ನು ಅನುಸರಿಸಿತ್ತು. ಬಿಜೆಪಿಯ ಆಂತರ್ಯದಲ್ಲಿ ನಡೆದ ಇದೆಲ್ಲವೂ ಈಗ ರಹಸ್ಯವಾಗಿ ಉಳಿದಿಲ್ಲ. ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ಈಗ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದೆ ವಚನ ಭ್ರಷ್ಟರಾಗಿರುವುದು ಹೈ ಕಮಾಂಡ್‌ ಗೆ ಬಿಸಿ ತುಪ್ಪವಾಗಿದೆ.

- Advertisement -

ಹೈಕಮಾಂಡ್ ಮತ್ತು ಯಡಿಯೂರಪ್ಪ ಅವರ ನಡುವೆ ನಡೆದ ಒಪ್ಪಂದಂತೆ ಎಂಟು ತಿಂಗಳ ಹಿಂದೆಯೇ ಯಡಿಯೂರಪ್ಪ ಅವರು ಪದತ್ಯಾಗ ಮಾಡಿ ಮಾಜಿ ಆಗಬೇಕಿತ್ತು. ಅವರ ಸ್ಥಾನಕ್ಕೆ ಬಿಜೆಪಿಯ ಇನ್ನೋರ್ವ ನಾಯಕ ಮುಖ್ಯಮಂತ್ರಿಯಾಗಿರುತ್ತಿದ್ದರು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡಲು ಬಿಲ್ ಕುಲ್ ಒಪ್ಪುತ್ತಿಲ್ಲ. ಒಂದು ಹಂತದಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಗೋವಿಂದ ಕಾರಜೋಳ ಅವರನ್ನು ಸೂಚಿಸಿದ್ದರೂ ಈಗ ಅದರಿಂದಲೂ ಹಿಂದೆ ಸರಿದಿದ್ದಾರೆ. ಇದರ ಪರಿಣಾಮ ಯಡಿಯೂರಪ್ಪ ತಮ್ಮದೇ ಪಕ್ಷದ ಹಿರಿಯ ಸಚಿವರ, ಶಾಸಕರ ಬಹಿರಂಗ ವಿರೋಧವೆಂಬ ಕಿರುಕುಳವನ್ನು ಎದುರಿಸಬೇಕಾಗಿದೆ. ಪಾರ್ಟಿ ವಿತ್ ಡಿಫ್ರೆನ್ಸ್ ಎಂದು ಆತ್ಮರತಿಯಲ್ಲಿ ತೇಲುತ್ತಿದ್ದ ಬಿಜೆಪಿ ಇತರೆ ಪಕ್ಷಗಳಿಗಿಂತಲೂ ಹೀನಾಯ ಒಳಜಗಳ, ಅಧಿಕಾರ ಕಿತ್ತಾಟ, ಭ್ರಷ್ಟಾಚಾರ, ಸ್ವಕುಟಂಬ ರಾಜಕಾರಣದಲ್ಲಿ ಮುಳುಗಿ ಹೋಗಿರುವುದು ಈಗಾಗಲೆ ಜಗಜ್ಜಾಹೀರಾಗಿದೆ.

2006 ರ ಜೆಡಿಎಸ್ ಜೊತೆಗಿನ 20:20 ಸರಕಾರದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರದ ರುಚಿ ಉಂಡ ಬಿಜೆಪಿ ನಂತರದ 2008 ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತದ ಕೊರತೆಯನ್ನು ಆಪರೇಶನ್ ಕಮಲ ಎಂಬ ರಾಜಕೀಯ ಅನೈತಿಕತೆ ಆಪರೇಶನ್ ಕಮಲದೊಂದಿಗೆ ಅಧಿಕಾರಕ್ಕೆ ಬಂದಿತ್ತಾದರೂ ಸ್ವತಃ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಸೇರಬೇಕಾಯಿತು. ಅಧಿಕಾರದಲ್ಲಿದ್ದಾಗಲೇ ಜೈಲು ಸೇರಿದ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರ ಪಾಲಿಗಿದೆ. ಈ ಐದು ವರ್ಷಗಳಲ್ಲಿ ಬಿಜೆಪಿ ಮೂರು ಜನ ಮುಖ್ಯಮಂತ್ರಿಗಳನ್ನು ಕೊಟ್ಟು ಸ್ವಜನಪಕ್ಷಪಾತ, ಭ್ರಷ್ಟಾಚಾರ, ಆಂತರಿಕ ಕಿತ್ತಾಟಗಳ ಕೊಂಪೆಯಂತಾಗಿರುವುದನ್ನು ಜನ ನೋಡುತ್ತಿದ್ದಾರೆ.

ರಾಜ್ಯದಲ್ಲಿ ಸುಭದ್ರ ಆಡಳಿತ ನೀಡುವಲ್ಲಿ ರಾಜ್ಯ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಸರಕಾರ ಖಜಾನೆ ದಿವಾಳಿಯಾಗಿದೆ. ಸಾಲ ಮಾಡಿ ತುಪ್ಪತಿನ್ನಿ ಎಂಬಂತೆ ಬಜೆಟ್ ಮಂಡಿಸಿದ ಯಡಿಯೂರಪ್ಪ ಅವರು ಜನಪರ ಆಡಳಿತ ನಡೆಸುವಲ್ಲಿ ಕೈಚೆಲ್ಲಿ ಕುಳಿತಿದ್ದಾರೆ. 2008ರಲ್ಲಿ ಶೋಭಾ ಕರಂದ್ಲಾಜೆಯ ಹಿಡಿತದಲಿದ್ದ ಸರಕಾರ ಈಗ ಯಡಿಯೂರಪ್ಪನವರ ಮಗ ಬಿ.ವೈ.ವಿಜಯೇಂದ್ರನ ಸುಪರ್ಧಿಯಲ್ಲಿದೆ. ಅಂದು ಇದ್ದ ಅಸಮಾಧಾನ, ದೂರುಗಳು ಇಂದು ಕೂಡ ಇವೆ. ಅಂದಿನ ಸರಕಾರಕ್ಕೂ ಇಂದಿನ ಸರಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಬಿಜೆಪಿಯ ಹಿರಿಯ ಸಚಿವರು, ಶಾಸಕರುಗಳೇ ವಿಜಯೇಂದ್ರನ ಮುಂದೆ ನಡು ಬಗ್ಗಿಸಿ ನಿಲ್ಲಬೇಕಾದ ಸ್ಥಿತಿ ಇದೆ. ಶೋಭಾ ಕರಂದ್ಲಾಜೆ ಅವರನ್ನು ಯಡಿಯೂರಪ್ಪನವರಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾಗಿರುವ ಯಡಿಯೂರಪ್ಪನವರ ಕುಟುಂಬ ಅಪ್ಪನ ಬೆಂಗಾವಲಾಗಿ, ಉತ್ತರಾಧಿಕಾರಿಯಾಗಿ ವಿಜಯೇಂದ್ರನನ್ನು ಪ್ರತಿಷ್ಠಾಪಿಸಿದೆ. ಸರಕಾರದ ಆಡಳಿತವೇ ವಿಜಯೇಂದ್ರನ ಇಶಾರೆಯ ಮೇಲೆ ನಡೆಯುತ್ತಿರುವುದು ಬಹಿರಂಗ ರಹಸ್ಯ.

ಯಡಿಯೂರಪ್ಪನವರ ಸುತ್ತ ವಿಜಯೇಂದ್ರನ ವ್ಯೂಹವೇ ಆವರಿಸಿರುವುದರಿಂದ ಮಗನ ಮರ್ಜಿಯಿಲ್ಲದೆ ಯಡಿಯೂರಪ್ಪ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಇದು ಪಕ್ಷದ ಹಿರಿಯ ಶಾಸಕರು, ಸಚಿವರನ್ನು ಕೆಂಗೆಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರ ಖಾತೆಯಲ್ಲೆ ಮಗ ವಿಜಯೇಂದ್ರನ ಹಸ್ತಕ್ಷೇಪಕ್ಕೆ ರೊಚ್ಚಿಗೆದ್ದ ಈಶ್ವರಪ್ಪ ನೇರವಾಗಿ ರಾಜ್ಯಪಾಲರಿಗೆ ದೂರು ನೀಡುವ ಮೂಲಕ ಬಂಡಾಯ ಬಾವುಟ ಹಾರಿಸಿದ್ದರು. ಯತ್ನಾಳ್ ಸತತವಾಗಿ ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿಯೇ ಟೀಕಿಸುತ್ತಾ ಮುಜುಗರ ಉಂಟು ಮಾಡುತ್ತಿರುವುದು ಬಿಜೆಪಿಯ ಶಿಸ್ತನ್ನು ಅಣಕಿಸುವಂತಿದೆ. ಪಕ್ಷ ಉಚ್ಛಾಟನೆಯ ಎಚ್ಚರಿಕೆ ನೀಡಿದ್ದರೂ ಅದಕ್ಕೆ ಸೊಪ್ಪಹಾಕದ ಯತ್ನಾಳ್ ಪಕ್ಷದ ಉಳಿವಿಗಾಗಿ ಯಡಿಯೂರಪ್ಪ ಮತ್ತವರ ಮಗನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಬೇಕೆಂಬ ಆಗ್ರಹಗಳನ್ನು ಹೈಕಮಾಂಡ್‌ ಗೆ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ, ರಾಜ್ಯ ಉಸ್ತುವಾರಿ ವಹಿಸಿರುವ ಅರುಣ್ ಸಿಂಗ್ ಅವರನ್ನು ಯಡಿಯೂರಪ್ಪ ಅವರ ವಕ್ತಾರರು, ಏಜೆಂಟರು ಎಂದು ಲೇವಡಿ ಮಾಡುವ ಮೂಲಕ ತಾನು ಯಾರಿಗೂ ಬಗ್ಗುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಬಿಜೆಪಿಯ ಅಂತರಾಳವನ್ನು ಗಮನಿಸಿದರೆ ಯತ್ನಾಳ್ ಅವರ ಬೆನ್ನಿಗೆ ಹೈಕಮಾಂಡ್‌ ನ ಬಲವಾದ ಕೈಗಳ ಆಶೀರ್ವಾದವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಉಳಿದ ಎರಡು ವರ್ಷಗಳಿಗೆ ಬದಲಿ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸುವ ಹೈಕಮಾಂಡ್ ಇಚ್ಛೆ ಅನುಷ್ಠಾನಕ್ಕೆ ಯತ್ನಾಳ್, ಈಶ್ವರಪ್ಪ ಅವರುಗಳನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ.

ಈ ವಿಷಯ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲವೆಂದನೇಲ್ಲ. ಯತ್ನಾಳ್, ಈಶ್ವರಪ್ಪಅವರ ದೂರುಗಳು, ಟೀಕೆಗಳಿಗೆ ಪ್ರತಿಕ್ರಿಯೆ ಕೊಡದೆ ಮೌನ ವಹಿಸಿರುವ ಯಡಿಯೂರಪ್ಪ ಮೌನವೂ ಒಂದು ರಾಜಕೀಯ ತಂತ್ರವೂ ಇರಬಹುದು. ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕರಿಲ್ಲವೆಂಬ ಸತ್ಯ ಬಿಜೆಪಿ ಹೈಕಮಾಂಡ್‌ ಗೆ ಗೊತ್ತಿದೆ. ಆದರೂ ಉತ್ತರ ಕರ್ನಾಟಕದ ಲಿಂಗಾಯಿತ ನಾಯಕನೊಬ್ಬನಿಗೆ ಪಟ್ಟ ಕಟ್ಟುವ ಮೂಲಕ ಯಡಿಯೂರಪ್ಪ ಅವರನ್ನು ನೈಪಥ್ಯಕ್ಕೆ ಸರಿಸುವ ಪ್ರಯತ್ನವನ್ನು ಮುಂದುವೆರೆಸಿದೆ. ಇದನ್ನೆ ಯತ್ನಾಳ್ ಮತ್ತೆ ಮತ್ತೆ ಹೇಳುತ್ತಾ ಇದೇ ಮೇ ತಿಂಗಳಿಗೆ ಯಡಿಯೂರಪ್ಪ ಅವರ ಪದಚ್ಯುತಿ ನಿಶ್ಚಿತ ಎಂಬ ಭವಿಷ್ಯವನ್ನು ನುಡಿದಿದ್ದಾರೆ.

ಐದು ವರ್ಷ ಆಡಳಿತ ಪೂರೈಸಲೇ ಬೇಕೆಂಬ ಹಠತೊಟ್ಟಿರುವ ಯಡಿಯೂರಪ್ಪ ದೆಹಲಿಯಲ್ಲಿ ಕುಳಿತು ಆಟ ಆಡಿಸುವವರ ತಂತ್ರಗಳಿಗೆ ಪ್ರತಿತಂತ್ರವಾಗಿ ತಾವೂ ಕೂಡ ಆಟ ಹೂಡಿದ್ದಾರೆ. ತಮ್ಮ ಬೆಂಬಲಿಗರ ಸಭೆ ನಡೆಸುವ ಮೂಲಕ ಬಲ ಪ್ರದರ್ಶನವನ್ನು ತೋರಿಸುತ್ತಿದ್ದಾರೆ. ವಲಸಿಗರ ಬಲ ದಿಕ್ಕು ತಪ್ಪದಂತೆ ನೋಡಿಕೊಂಡಿದ್ದಾರೆ. ಆದರೆ ಕಳೆದ ಎರಡು ವರ್ಷಗಳ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಆಡಳಿತ ರಾಜ್ಯದ ಜನರಲ್ಲಿ ಯಾವುದೇ ಭರವಸೆಯನ್ನು ಮೂಡಿಸುವಲ್ಲಿ ವಿಫಲವಾಗಿದೆ. ಬಿಜೆಪಿ ಆಂತರಿಕ ಕಚ್ಚಾಟ, ಭ್ರಷ್ಟಾಚಾರ ಆರೋಪಗಳು, ತಾಳಮೇಳವಿಲ್ಲದ ಆಡಳಿತದಿಂದಾಗಿ ಎಲ್ಲವೂ ಅಯೋಮಯವಾಗಿವೆ.

1994ರಲ್ಲಿ ಅಧಿಕಾರಕ್ಕೆ ಬಂದ ಜನತಾದಳ ತಕ್ಕ ಮಟ್ಟಿಗಿನ ಆಡಳಿತ ಕೊಟ್ಟರೂ ಆಂತರಿಕ ಕಚ್ಚಾಟದಿಂದ ಅವಧಿಗೆ ಮುಂಚೆಯೇ ಒಡೆದು ಹೋಳಾಗಿ ನೆಲಕಚ್ಚಿ ಹೋಯಿತು. ಕಾಂಗ್ರೆಸ್‌ ನಿಂದ ಸಿಡಿದ ಎಸ್.ಬಂಗಾರಪ್ಪ ಕಾಂಗ್ರೆಸ್ಸನ್ನು 1999ರ ವರೆಗೆ ಅಧಿಕಾರ ಹಿಡಿಯಲು ಆಗದಂತೆ ಹಣಿದು ಹಾಕಿದ್ದರು. ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಅವರುಗಳು ಮಾತ್ರವೇ ಪಕ್ಷದೊಳಗಿದ್ದ ತಮ್ಮ ವಿರೋಧಿಗಳು ತಲೆ ಎತ್ತದಂತೆ ಪೂರ್ಣಾವಧಿ ಆಡಳಿತ ನೀಡುವಲ್ಲಿ ಯಶಸ್ವಿಯಾದರು.

ಇದೀಗ ಅಧಿಕಾರದಲ್ಲಿರುವ ಯಡಿಯೂರಪ್ಪ ಅವರು ಅವಧಿ ಪೂರ್ಣಗೊಳಿಸುವ ಬಗ್ಗೆ ಅವರದ್ದೇ ಪಕ್ಷದ ನಾಯಕರುಗಳಲ್ಲಿ ವಿಶ್ವಾಸವಿಲ್ಲ. ಅಧಿಕಾರವಿಲ್ಲದಿದ್ದಾಗ ಒಗ್ಗಟ್ಟು ಪ್ರತಿಪಾದಿಸುವ ಪಕ್ಷಗಳು ಅಧಿಕಾರಕ್ಕೆ ಬಂದಾಗ ಭಿನ್ನಮತ, ಕಾಲೆಳೆದಾಟ ಚಾಳಿಗೆ ಬೀಳುವ ಚರಿತ್ರೆಯೇ ಇದೆ. ಇದರಿಂದ ಬಿಜೆಪಿಯೂ ಹೊರತಾಗಿಲ್ಲ ಎಂಬುದು ದಶಕದ ಹಿಂದೆಯೇ ಸಾಬೀತಾಗಿದೆ.

ಸದ್ಯದ ಬಿಜೆಪಿಯ ಪರಿಸ್ಥಿತಿ ನೋಡಿದರೆ 2023ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅನುಮಾನ, ಉಳಿದ ಎರಡು ವರ್ಷಗಳಲ್ಲಿ ಹೇಗಾದರೂ ಮಾಡಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೆಂಬ ಮಹಾದಾಸೆಯಲ್ಲಿ ಯತ್ನಾಳ್, ಕೆ.ಎಸ್.ಈಶ್ವರಪ್ಪ, ಆರ್.ಆಶೋಕ್, ಸಿ.ಟಿ ರವಿ ಸೇರಿದಂತೆ ಅನೇಕರು ಕನಸು ಕಾಣತೊಡಗಿದ್ದಾರೆ.

Join Whatsapp