►’ಬಿಜೆಪಿ, ಮೋದಿ ಅಧಿಕಾರದಲ್ಲಿರುವುದು ಶತಮಾನದ ದೊಡ್ಡ ದುರಂತ’
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರಿದ ಬಳಿಕ ದೇಶದ ಜನರು ತತ್ತರಿಸಿದ್ದು, ಮೋದಿಯು ಆಧುನಿಕ ದುರ್ಯೋಧನ ಮಾತ್ರವಲ್ಲ ಆಧುನಿಕ ಭಸ್ಮಾಸುರನೂ ಹೌದು ಎಂದು ಮಾಜಿ ಸಂಸದ, ಕಾಂಗ್ರೆಸ್ ನಾಯಕ ವಿ.ಎಸ್ ಉಗ್ರಪ್ಪ ಟೀಕಾಪ್ರಹಾರ ನಡೆಸಿದ್ದಾರೆ.
ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕೇವಲ ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡು ಬಂದಿರುವ ಮೋದಿ, ದೇಶದ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ. ಕೇವಲ ಜನರ ಭಾವನೆಗಳ ಮೇಲೆ ಆಟವಾಡಿದ್ದೇ ಮೋದಿಯ ಸಾಧನೆ. ಶಿಕ್ಷಣ, ಆರೋಗ್ಯಕ್ಕಾಗಿ ಮೋದಿ ಮಾಡಿದ್ದೇನು ಇಲ್ಲ ಎಂದ ವಿ.ಎಸ್ ಉಗ್ರಪ್ಪ, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ಕಾರಣ ತಾವು ಈ ಹಿಂದೆ ಮೋದಿಯನ್ನು ಆಧುನಿಕ ದುರ್ಯೋಧನ ಎಂದು ಕರೆದಿದ್ದೆ. ಆದರೆ ಅವರು ದುರ್ಯೋಧನ ಮಾತ್ರವಲ್ಲ ಆಧುನಿಕ ಭಸ್ಮಾಸುರನಾಗಿದ್ದಾರೆ. ಮೋದಿ ದೇಶವನ್ನು ಭಸ್ಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ದೇಶವನ್ನು ಆಳುವುದು ಮತ್ತು ಪ್ರಧಾನಿಯಾಗಿ ಮೋದಿ ಅಧಿಕಾರದಲ್ಲಿ ಇರುವುದು ಶತಮಾನದ ಅತ್ಯಂತ ದೊಡ್ಡ ದುರಂತ ಎಂದು ಹೇಳಿದ ಉಗ್ರಪ್ಪ, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಎಮ್ ಎಲ್ ಸಿ ಪ್ರಕಾಶ್ ರಾಥೋಡ್ ಮತ್ತು ಕಾಂಗ್ರೆಸ್ ವಕ್ತಾರರು ಉಪಸ್ಥಿತರಿದ್ದರು.