ಮೈಸೂರು | SC/STಯವರಿಗೆ ಕ್ಷೌರ ಮಾಡಿದ ಕ್ಷೌರಿಕನಿಗೆ ಸಾಮಾಜಿಕ ಬಹಿಷ್ಕಾರ

Prasthutha|

ಮೈಸೂರು : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವ್ಯಕ್ತಿಗಳಿಗೆ ಕ್ಷೌರ ಮಾಡಿದುದಕ್ಕೆ ಕ್ಷೌರಿಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ವರದಿಯಾಗಿದೆ.

- Advertisement -

ಹಲ್ಲರೆ ಗ್ರಾಮದ ಕ್ಷೌರಿಕ ಮಲ್ಲಿಕಾರ್ಜುನ ಶೆಟ್ಟಿ (48) ಕುಟುಂಬವು ಬಹಳ ಹಿಂದಿನಿಂದಲೂ ಕ್ಷೌರಿಕ ವೃತ್ತಿ ಮಾಡಿಕೊಂಡು ಬರುತ್ತಿದೆ. ಮೂರು ತಿಂಗಳ ಹಿಂದೆ ಮಹಾದೇವ್ ನಾಯ್ಕ್, ಶಂಕರ, ಶಿವರಾಜ್ ಮತ್ತು ಕೆಲವರ ಗುಂಪು ಶೆಟ್ಟಿ ಅವರ ಅಂಗಡಿಗೆ ತೆರಳಿ ನೀವು ಪರಿಶಿಷ್ಟ ಜಾತಿ, ವರ್ಗದವರಿಗೆ ಕೂದಲು ಕತ್ತರಿಸುತ್ತೀರಾ ಎಂದು ಕೇಳಿದೆ. ಅದಕ್ಕೆ ತಾವು ಯಾವುದೇ ತಾರತಮ್ಯ ಮಾಡದೆ, ಎಲ್ಲರ ಕೂದಲು ಕತ್ತರಿಸುವುದಾಗಿ ಹೇಳಿರುವುದಕ್ಕೆ ಆಕ್ರೋಶಿತವಾದ ಗುಂಪು, ಶೆಟ್ಟಿ ಅವರ ಅಂಗಡಿಗೆ ತೆರಳದಂತೆ ಪ್ರಚಾರ ಮಾಡಿದ್ದಾರೆ.

ಅಲ್ಲದೆ, ಎರಡು ತಿಂಗಳ ಹಿಂದೆ ತಮ್ಮ 21ರ ಹರೆಯದ ಮಗನನ್ನು ಕರೆದುಕೊಂಡು ಹೋಗಿ ಒತ್ತಾಯವಾಗಿ ಮದ್ಯಪಾನ ಮಾಡಿಸಿ, ಆತನನ್ನು ನಗ್ನಗೊಳಿಸಿ ವೀಡಿಯೊ ಮಾಡಿದ್ದಾರೆ. ತಮ್ಮ ದೌರ್ಜನ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ, ನಿನ್ನ ಮಗನ ಬೆತ್ತಲೆ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮರ್ಯಾದಿ ಕಳೆಯುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಶೆಟ್ಟಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಮಾತನ್ನು ಮೀರಿದ್ದಕ್ಕೆ 5,000 ರೂ. ದಂಡವನ್ನೂ ಹಾಕಿದ್ದಾರೆ. ಅದನ್ನೂ ನಾನು ಪಾವತಿಸಿದ್ದೇನೆ ಎಂದು ಶೆಟ್ಟಿ ತಿಳಿಸಿದ್ದಾರೆ.

- Advertisement -

ಆದರೆ, ಜಾತಿವಾದಿ ಗುಂಪಿನ ಮಾತನ್ನು ಕೇಳದ್ದಕ್ಕೆ ಈಗ 50,000 ರೂ. ದಂಡ ವಿಧಿಸಿದ್ದಾರೆ. ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ಈ ಬಗ್ಗೆ ನಂಜನಗೂಡು ತಹಾಶೀಲ್ದಾರರು, ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಏನೂ ಪ್ರಯೋಜನವಾಗದ ಕಾರಣ ಮಾಧ್ಯಮದ ಮುಂದೆ ಬಂದಿದ್ದೇನೆ ಎಂದು ಶೆಟ್ಟಿ ತಿಳಿಸಿದ್ದಾರೆ.

ಆದರೆ, ಶೆಟ್ಟಿ ಅವರು ದೂರು ದಾಖಲಿಸಲು ಹೇಳದ ಕಾರಣ, ತಾವು ಎರಡೂ ಗುಂಪುಗಳನ್ನು ಕರೆಸಿ ಸಂಧಾನ ಮಾಡಿದ್ದುದಾಗಿ ಪೊಲೀಸರು ಹೇಳಿದ್ದಾರೆ. ತಮ್ಮ ಮಗನ ವೀಡಿಯೊ ಬಹಿರಂಗ ಪಡಿಸುವುದಾಗಿ ಬೆದರಿಕೆಯೊಡ್ಡಿದುದರಿಂದ ತಾನು ದೂರು ದಾಖಲಿಸಿರಲಿಲ್ಲ ಎಂದು ಶೆಟ್ಟಿ ಹೇಳಿದ್ದಾರೆ.

ಈ ಬಗ್ಗೆ ತಾವು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದೇನೆ, ದೌರ್ಜನ್ಯ ಕಂಡು ಬಂದರೆ ಸ್ವಯಂ ಪ್ರೇರಿತ ದೂರು ದಾಖಲಿಸಿ, ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸುತ್ತೇನೆ ಎಂದು ನಂಜನಗೂಡು ತಹಾಶೀಲ್ದಾರ್ ಮಹೇಶ್ ಕುಮಾರ್ ಹೇಳಿದ್ದಾರೆ.

ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿರುವ ಶೆಟ್ಟಿ ಅವರಿಗೆ ಸೂಕ್ತ ಭದ್ರತೆ ಒದಗಿಸುವ ಅಗತ್ಯವಿದೆ. ಈಗಿನ ಕಾಲದಲ್ಲೂ ಜಾತಿ ತಾರತಮ್ಯ ನಡೆಸುವ ಜಾತಿವಾದಿ ಗುಂಪುಗಳನ್ನು ಹತೋಟಿಗೆ ತರುವುದು ಕಾನೂನು ಪಾಲಕರ ಆದ್ಯತೆಯಾಗಬೇಕಾಗಿದೆ.

Join Whatsapp