ಮುಸ್ಲಿಮರ ವಿರುದ್ಧ ಸಾಮಾಜಿಕ, ಆರ್ಥಿಕ ಬಹಿಷ್ಕಾರಕ್ಕೆ ಕರೆ; ಆನಂದ್ ಸ್ವರೂಪ್ ವಿರುದ್ಧ ತನಿಖೆ ಆರಂಭ

Prasthutha|

ಮುಸ್ಲಿಮರ ವಿರುದ್ಧ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿರುವ ವಾರಣಾಸಿ ಮೂಲದ ಶಂಕರಾಚಾರ್ಯ ಪರಿಷತ್ ಅಧ್ಯಕ್ಷ, ಹಿಂದುತ್ವ ಪ್ರತಿಪಾದಕ ಸ್ವಾಮಿ ಆನಂದ್ ಸ್ವರೂಪ್ ವಿರುದ್ಧ ಮೀರತ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಭಾನುವಾರ ಚೌದರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಗ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕುರಾನ್ ಓದುವವನು ಅನಾಗರಿಕರಾಗುತ್ತಾನೆ, ಅವರು ಮನುಷ್ಯರಾಗುವುದಿಲ್ಲ. ಭಾರತದಲ್ಲಿ ಇರಲು ಬಯಸುವವರು ಕುರಾನ್ ಮತ್ತು ನಮಾಜ್ ಅನ್ನು ತ್ಯಜಿಸಬೇಕು. ನಾವು ಮುಸ್ಲಿಮರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಿಷ್ಕರಿಸಲು ಪ್ರಾರಂಭಿಸಿದರೆ ಅವರು ಹಿಂದೂ ಧರ್ಮವನ್ನು ಸ್ವೀಕರಿಸುತ್ತಾರೆ ಎಂದು ಸ್ವರೂಪ್ ಹೇಳಿರುವುದು ವೀಡಿಯೋದಲ್ಲಿ ಕಂಡುಬಂದಿದೆ.
“ನಮಗೆ ಒಂದು ಕೋಟಿ ಹಿಂದೂ ಯುವಕರ ಸೈನ್ಯ ಬೇಕು. ನಮಗೆ ಸ್ವಯಂ ಸೇವಕ್ ಅಗತ್ಯವಿಲ್ಲ, ನಮಗೆ ಈಗ ಸ್ವಯಂ-ಸೇನೆ ಬೇಕು. ಕತ್ತಿಗಳು, ಬಂದೂಕುಗಳು ಅಥವಾ ನಿಮ್ಮ ಬಳಿ ಏನೇ ಇರಲಿ ಅವುಗಳನ್ನು ಎತ್ತಿಕೊಳ್ಳಬೇಕು, ಈಗಾಗಲೇ ಯುದ್ಧ ಘೋಷಿಸಲಾಗಿದೆ ಮತ್ತು ನಾವು ಹಿಂದೂ ರಾಷ್ಟ್ರವನ್ನು ಹೊಂದುವವರೆಗೆ ಅದು ಮುಂದುವರಿಯುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ ಎನ್ನಲಾಗಿದೆ.
ಎಂ.ಡಿ. ಆಸಿಫ್ ಖಾನ್ ಎಂಬವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಸೋಮವಾರ ಹಂಚಿಕೊಂಡಿದ್ದರು. ಈ ಪ್ರಕರಣವನ್ನು ಸೈಬರ್ ಸೆಲ್‌ ನಿಂದ ತನಿಖೆ ನಡೆಸಲಾಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೀರತ್ ಪೊಲೀಸರು ಮಂಗಳವಾರ ರಾತ್ರಿ ತಿಳಿಸಿದ್ದಾರೆ.



Join Whatsapp