ಮುಸ್ಲಿಮರ ಬಗ್ಗೆ ಪ್ರಧಾನಿಯವರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ – ಹರಿಪ್ರಸಾದ್ ಟೀಕೆ

Prasthutha|

ಬೆಂಗಳೂರು: ಈ ಬಾರಿಯ 2023 ರ ವಿಧಾನಸಭೆ ಚುನಾವಣೆ ಮಹಾತ್ಮ ಗಾಂಧಿ ಹಾಗೂ ನಾಥುರಾಮ್ ಗೋಡ್ಸೆ ನಡುವಿನ ಹೋರಾಟ. ಎರಡು ಸಿದ್ದಾಂತಗಳ ನಡುವೆ ಚುನಾವಣೆ ನಡೆಯುತ್ತದೆ. ಮಹಾತ್ಮ ಗಾಂಧಿಯ ಸತ್ಯ ಹಾಗೂ ಅಹಿಂಸೆ ಸಿದ್ದಾಂತ ಒಂದು ಕಡೆ ಹಾಗೂ ಮತ್ತೊಂದು ಕಡೆ ನಾಥುರಾಮ್ ಗೋಡ್ಸೆ ಹಿಂಸೆ ಮತ್ತು ಸುಳ್ಳಿನ ಸಿದ್ಧಾಂತದ ನಡುವಿನ ಹೋರಾಟ ನಡೆಯುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಬೊಮ್ಮಾಯಿ ಭೇಟಿ ಕೊಡ್ತಾರೆ, ಆದರೆ ಮಸೂದ್ ಮನೆಗೆ ಭೇಟಿ ಕೊಡಲ್ಲ. ಸಿಎಂ ಬೊಮ್ಮಾಯಿ ರಾಜ್ಯದ ಆರು ಕೋಟಿ ಜನರಿಗೆ ಮುಖ್ಯಮಂತ್ರಿನಾ ಎಂಬುದನ್ನು ಸ್ಪಷ್ಟಪಡಿಸಬೇಕು. ಕರಾವಳಿಯನ್ನು ಬಿಜೆಪಿ ಪ್ರಯೋಗ ಶಾಲೆಯನ್ನಾಗಿ ಮಾಡಿದೆ. ಪರೇಶ್ ಮೇಸ್ತಾ ಕೊಲೆ ಪ್ರಕರಣದಲ್ಲಿ ಬಿ ರಿಪೋರ್ಟ್ ಬಂದಾಗ ಇವರ ಬಣ್ಣ ಬಯಲಾಗಿದೆ. ಕರ್ನಾಟಕದ ಖ್ಯಾತಿ ಮರುಗಳಿಸಬೇಕಾದರೆ ಕುಖ್ಯಾತರಾಗಿರುವ ಬಿಜೆಪಿಯನ್ನು ಮನೆಗೆ ಕಳಿಸಬೇಕಾಗಿದೆ ಎಂದು ಹರಿಹಾಯ್ದರು.
ನನಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ಅಪಾರವಾದ ಗೌರವ ಇದೆ. ಸುದೀರ್ಘ ರಾಜಕೀಯದಲ್ಲಿ ಸಣ್ಣ ಕಪ್ಪು ಚುಕ್ಕೆಯೂ ನನ್ನ ಮೇಲಿಲ್ಲ. ನನ್ನ ಹೇಳಿಕೆಯನ್ನ ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡು ವರದಿ ಮಾಡಿವೆ. ನಾನು ವಿಷಾದ ವ್ಯಕ್ತಪಡಿಸಿದ್ದು ಲೈಂಗಿಕ ಸಮುದಾಯದ ಮಹಿಳೆಯರಿಗೆ ನೋವಾಗಿದ್ದರೆ ಮಾತ್ರ ಎಂದು. ಮತಾಂತರವಾಗಿರುವ ಶಾಸಕರಿಗಲ್ಲ ಎಂದು ಪುನರುಚ್ಚರಿಸಿದರು.
ಜೆಡಿಎಸ್ ಜೊತೆಗಿನ ಮೈತ್ರಿ ನಿರ್ಧಾರದ ಸಂದರ್ಭದಲ್ಲಿ ನಮ್ಮನ್ನು ಕೇಳಿ ನಿರ್ಧಾರ ಮಾಡಿಲ್ಲ ಎಂಬುದು ಸುಳ್ಳು. ಮೈತ್ರಿ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಇವರು ಏಕೆ ಸುಮ್ಮನಿದ್ದರು? ಮಂತ್ರಿಯಾಗಿಲ್ಲ ಎಂದು ಮಾರಾಟ ಆದಾಗ ಇದಕ್ಕೆ ಏನು ಹೇಳಬೇಕು. ಶಾಸಕಾಂಗ ಪಕ್ಷದಲ್ಲಿ ಚರ್ಚೆ ಮಾಡಿಯೇ ಜೆಡಿಎಸ್ ಜೊತೆ ಮೈತ್ರಿ ಮಾಡಿದ್ದು ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ಮೂರು ವರ್ಷದ ಬಿಜೆಪಿ ಆಡಳಿತದಲ್ಲಿ ಬಿಜೆಪಿಯದ್ದು ಶೂನ್ಯ ಸಾಧನೆ. ಇದು ಜನ ವಿರೋಧಿ ಸರ್ಕಾರ. ನಳಿನ್ ಕುಮಾರ್ ಕಟೀಲ್ ಚರಂಡಿ ರಸ್ತೆ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದಿದ್ದಾರೆ. ಹಲಾಲ್, ಹಿಜಾಬ್, ಖಬರಸ್ಥಾನ ಬಗ್ಗೆ ಬಿಜೆಪಿ ಮಾತಾಡುತ್ತೆ, ಬಿಜೆಪಿಗೆ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುವ ಧೈರ್ಯ ಎಲ್ಲೂ ಮಾಡಿಲ್ಲ. ಗೃಹ ಇಲಾಖೆ ವರದಿ ಪ್ರಕಾರ ಮೂರು ವಾರಗಳಿಗೆ ಒಂದು ಬಾರಿ ರಾಜ್ಯದಲ್ಲಿ ಕೋಮು ಗಲಭೆ ಆಗುತ್ತಿದೆ. ಅಭಿವೃದ್ಧಿ ಬೇಕಾಗಿಲ್ಲ ಬಿಜೆಪಿಗೆ, ಜನರ ಗಮನ ಬೇರೆ ಕಡೆ ಸೆಳೆಯುವ ಕೆಲಸ ಮಾಡ್ತಿದೆ ಎಂದು ಟೀಕಿಸಿದರು.

- Advertisement -

ಎನ್ ಇ ಪಿ ಜಾರಿ ಮೂಲಕ ಶಿಕ್ಷಣ ಕ್ಷೇತ್ರ ಕೆಳಮಟ್ಟಕ್ಕೆ ಕುಸಿಯುತ್ತಿದೆ. ಸಂಸದೆ ಪ್ರಜ್ಞಾ ಠಾಕೂರ್ ಮನೆಯಲ್ಲಿ ಚಾಕು ಚೂರಿ ಕತ್ತಿ ಸಂಗ್ರಹ ಮಾಡಿ ಎಂದಿದ್ದಾರೆ. ಕರ್ನಾಟಕದ ಭವಿಷ್ಯದ ಬಗ್ಗೆ ಎಲ್ಲರೂ ಯೋಚನೆ ಮಾಡುವ ವಿಚಾರ ಬಂದಿದೆ. ನಾವು ಮಕ್ಕಳ ಕೈಯಲ್ಲಿ ಪೆನ್ನು, ಪುಸ್ತಕ ಕೊಡಿ ಅಂದ್ರೆ ಬಿಜೆಪಿಯವರು ಹಾಗೂ ಅದರ ಅಂಗಸಂಘಟನೆ ಮುತಾಲಿಕ್ ಚಾಕು ಚೂರಿ ಮಾತಾಡ್ತಾರೆ. ಇಂತಹ ಅಪಾಯಕಾರಿ ವಿಷಯಗಳ ಬಗ್ಗೆ ಜನ ಜಾಗೃತಿ ಆಗಬೇಕಿದೆ ಎಂದು ಹರಿಪ್ರಸಾದ್ ಹೇಳಿದರು.
ಮಂಡ್ಯಕ್ಕೆ ಅಮಿತ್ ಶಾ ಬಂದಾಗ ಕೆಎಂಎಫ್ ಅನ್ನು ಅಮೂಲ್ ಜೊತೆ ಸೇರಿಸುವ ಮಾತನ್ನಾಡುತ್ತಾರೆ. ಅಮಿತ್ ಶಾ ವ್ಯಾಪಾರ ಮಾಡಲು ಬಂದಿದ್ದಾರೆ ಅಭಿವೃದ್ಧಿಗಲ್ಲ. ಪ್ರಾಣ ಹೋದರೂ ಕೆ ಎಂ ಎಫ್ ಅನ್ನು ಅಮೂಲ್ ಜೊತೆ ಸೇರಿಸಲು ಬಿಡಲ್ಲ ಎಂದರು.
ಆಸೆ ಅಮಿಷಗಳಿಗೆ ಪಕ್ಷಾಂತರ ಆಗುವವರನ್ನು ಒಪ್ಪಲು ಆಗಲ್ಲ. ಮಂತ್ರಿ ಆಗಲು ಹೋದವರನ್ನು ಏನೂಂತ ಕರೆಯುತ್ತೀರಿ. ಸರ್ಕಾರ, ಪಕ್ಷದ ಕಾರ್ಯಕ್ರಮ ಅವರು ನೋಡಿಕೊಂಡು ಬರಬಹುದು. ಕಾಂಗ್ರೆಸ್ ನಲ್ಲಿ ಬೀದಿ ಜಗಳವಿಲ್ಲ. ಮತಬೇಧ ಸಹಜ ಆದರೆ ಮನ ಭೇದವಿಲ್ಲ ಎಂದರು.
ಮುಸ್ಲಿಮರ ಬಗ್ಗೆ ಪ್ರಧಾನಿಯವರ ಮಾತುಗಳು ನರೇಂದ್ರ ಮೋದಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ಅವರ ರಾಜಕಾರಣವೇ ದ್ವೇಷ ಹಾಗೂ ಪ್ರತಿಕಾರವಾಗಿದೆ. ಚುನಾವಣೆ ಹತ್ತಿರ ಬಂದಿದೆ, ಅವರಿಗೆ ಗೊತ್ತಾಗಿದೆ. ಲವ್ ಜಿಹಾದ್, ಹಿಜಾಬ್, ಹಲಾಲ್, ಆಝಾನ್ ವಿವಾದ ಹೊಡೆತ ಕೊಡುತ್ತೆ ಎಂದು ಗೊತ್ತಾಗಿದೆ. ಅದಕ್ಕೆ ಯಡಿಯೂರಪ್ಪ ಅವರನ್ನು ವಾಪಸ್ ಕರೆಸಿಕೊಂಡಿದ್ದಾರೆ. ಮುಸ್ಲಿಂರ ಪರ ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಟಿಪ್ಪು ಸುಲ್ತಾನ್ ಟೋಪಿ ಹಾಕಿದ್ದರು. ಅವರ ಮಾತನ್ನು ಮುಸ್ಲಿಮರು ಕೇಳುತ್ತಾರೆ ಎಂದು ಇವಾಗ ಅವರನ್ನು ಮುಂದೆ ಬಿಟ್ಟಿದ್ದಾರೆ ಎಂದರು.
ಬಿಜೆಪಿಯವರು ಸುಳ್ಳೇ ದೇವರೆಂದು ನಂಬಿದವರು ಅವರು. ಹಿಂಸೆಯೇ ಅವರ ಸಿದ್ದಾಂತ. ಗೃಹ ಮಂತ್ರಿಗಳು ಪರಪ್ಪನ ಅಗ್ರಹಾರ ಹೇಗಿದೆ ಅಂತ ಚೆಕ್ ಮಾಡಿ ಬಂದಿದ್ದಾರೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಅವರನ್ನ ಜೈಲಿಗೆ ಕಳಿಸುತ್ತೇವೆ. ಎಲ್ಲರೂ ಜೈಲಿಗೆ ಸೇರೋ ಕಾಲ ಸನಿಹವಾಗಿದೆ. ಇನ್ನೂ ಸರ್ಕಾರದಲ್ಲಿ 90 ದಿನಗಳ ಅವಧಿ ಇದೆ. ಬೊಮ್ಮಾಯಿ ಅವರ ಮಾತಿನಲ್ಲೇ ಹೇಳೋದಾದ್ರೆ ತಾಕತ್ ಇದ್ರೆ, ದಮ್ ಇದ್ರೆ ನಮ್ಮನ್ನ ಜೈಲಿಗೆ ಕಳಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಪಕ್ಷದ ಕಾರ್ಯಕರ್ತರಿಗೆ ಅಭ್ಯರ್ಥಿಯಾಗುವ ಎಲ್ಲಾ ಅವಕಾಶಗಳಿವೆ. ಹೀಗಾಗಿ ಅರ್ಜಿ ಕರೆದಿದ್ದೇವ. ಪಕ್ಷದ ಉನ್ನತ ಮಟ್ಟದ ಸಮಿತಿಗಳು ಕೆಳ ಹಂತದ ಸಮಿತಿಗಳ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತೆ. ಕೆಲವು ಸಂದರ್ಭಗಳಲ್ಲಿ ಸಣ್ಣ ಪುಟ್ಟ ತಪ್ಪುಗಳಾಗಬಹುದು. ಆದ್ರೆ ಈ ಬಾರಿ ಜನ ತೀರ್ಮಾನ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನ ಸಂಪೂರ್ಣ ಬಹುಮತದಿಂದ ಆಯ್ಕೆ ಮಾಡುತ್ತಾರೆ ಎಂದು ಹರಿಪ್ರಸಾದ್ ಹೇಳಿದರು.

Join Whatsapp