ಡೆಹ್ರಾಡೂನ್: ಉತ್ತರಾಖಂಡ ಸಚಿವ ಸಂಪುಟ ಮತ್ತು ಪಕ್ಷದಿಂದ ತನಗೆ ಯಾವುದೇ ಮಾಹಿತಿ ನೀಡದೆ ತನ್ನನ್ನು ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಹರಕ್ ಸಿಂಗ್ ರಾವತ್ ಹೇಳಿದ್ದಾರೆ. ಈ ಬಗ್ಗೆ ನನ್ನ ಬಳಿ ಒಮ್ಮೆಯೂ ಚರ್ಚಿಸಿಲ್ಲ ಎಂದು ಮಾಧ್ಯಮಗಳಮುಂದೆ ಕಣ್ಣೀರಿಟ್ಟರು.
ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ನನಗೆ ಒಮ್ಮೆಯೂ ಮಾಹಿತಿ ನೀಡಲಿಲ್ಲ, ಆ ಬಗ್ಗೆ ಮಾತನಾಡಲೂ ಇಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕರೆ ಮಾಡಿದ್ದರು, ಆದರೆ ಟ್ರಾಫಿಕ್ ನಿಂದಾಗಿ ಬರಲು ತಡವಾಗಿತ್ತು. ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಅವರನ್ನು ದೆಹಲಿಗೆ ತೆರಳಿದ್ದೆ. ಆದರೆ, ಅಷ್ಟೊತ್ತಿಗೆ ಅವರು ನನ್ನನ್ನು ವಜಾಗೊಳಿಸಿದ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಬಿಡುಗಡೆ ಮಾಡಿದ್ದರು’ ಎಂದು ಹರಕ್ ಸಿಂಗ್ ರಾವತ್ ಹೇಳಿದರು. ನನಗೆ ಮಂತ್ರಿ ಪದವಿಯೊಂದಿಗೆ ಯಾವುದೇ ಬಯಕೆ ಇಲ್ಲ. ಜನಸೇವೆಗಾಗಿ ಮಾತ್ರ ಕೆಲಸ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದರು.
ಈ ಮಧ್ಯೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತರಾಖಂಡನ್ನು ಹಿಡಿದಿಟ್ಟುಕೊಳ್ಳಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್ ನೊಂದಿಗೆ ಸಹಕರಿಸುತ್ತೇನೆ.ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇನೆ ಎಂದು ಘೋಷಿಸಿದರು. ಈ ಹಿಂದೆ ಕಾಂಗ್ರೆಸ್ ನೊಂದಿಗೆ ಚರ್ಚೆನಡೆದಿತ್ತು ಎಂಬ ವದಂತಿಗಳನ್ನು ಅವರು ನಿರಾಕರಿಸಿದರು.
ಅರಣ್ಯ ಸಚಿವರಾಗಿದ್ದ ಹರಕ್ ಸಿಂಗ್ ರಾವತ್ ಅವರನ್ನು ಮಂಗಳವಾರ ರಾತ್ರಿ ಸಚಿವ ಸಂಪುಟ ಮತ್ತು ಪಕ್ಷದಿಂದ ಉಚ್ಚಾಟಿಸಲಾಗಿದೆ. ರಾವತ್ ಕಾಂಗ್ರೆಸ್ ಗೆ ಮರಳಬಹುದು ಎಂಬ ಬಲವಾದ ಸೂಚನೆಗಳನ್ನು ಅನುಸರಿಸಿ ಪಕ್ಷವು ಈ ಕ್ರಮವನ್ನು ಕೈಗೊಂಡಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ಸಚಿವರ ವಜಾದ ಬಗ್ಗೆ ರಾಜ್ಯಪಾಲರರಿಗೆ ಮಾಹಿತಿ ನೀಡಿದರು. 2016 ರಲ್ಲಿ ಕಾಂಗ್ರೆಸ್ ನಾಯಕ ಹರೀಶ್ ರಾವತ್ ವಿರುದ್ಧ ದಂಗೆ ಎದ್ದು ಬಿಜೆಪಿಗೆ ಹಾರಿದ ಹತ್ತು ಶಾಸಕರಲ್ಲಿ ಹರಕ್ ಸಿಂಗ್ ರಾವತ್ ಕೂಡಾ ಒಬ್ಬರು.
ಮುನ್ಸೂಚನೆ ನೀಡದೇ ಪಕ್ಷದಿಂದ ಉಚ್ಚಾಟಿಸಿದ ಉತ್ತರಾಖಂಡ ಸರಕಾರ: ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಅರಣ್ಯ ಸಚಿವ
Prasthutha|