ಬೆಂಗಳೂರು : ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ ಎನ್ನುವ ಮೂಲಕ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ಕೇಂದ್ರ ಮತ್ತು ಸಂಸದರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಾ ಅವರು ಈ ಮಾತುಗಳನ್ನಾಡಿದ್ದಾರೆ ಎಂದು ‘ಈ ಸಂಜೆ’ಯ ಅಂತರ್ಜಾಲ ಆವೃತ್ತಿ ವರದಿ ಮಾಡಿದೆ.
ಬಿಎಸ್ಎನ್ಎಲ್ ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ. ಅವರನ್ನು ಸರಿ ಮಾಡಿಸಲು ನಮ್ಮ ಸರ್ಕಾರಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಂತಹಂತವಾಗಿ ಇದನ್ನು ತೆಗೆದುಹಾಕಿ ಖಾಸಗೀಕರಣಗೊಳಿಸುತ್ತೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಬಿಎಸ್ಎನ್ಎಲ್ ನೆಟ್ ವರ್ಕ್ ಬಗ್ಗೆ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಹೌದು, ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಎಷ್ಟೋ ಉತ್ತಮ. ಬೆಂಗಳೂರಿಗೆ ಹೋದರೆ, ಎಲ್ಲಿಯೂ ನೆಟ್ ವರ್ಕ್ ಸಿಗುವುದಿಲ್ಲ. ದೆಹಲಿಗೆ ಹೋದರೆ ಅಲ್ಲಿ ಕೂಡ ನಮ್ಮ ಮನೆಯಲ್ಲಿ ಬಿಎಸ್ ಎನ್ ಎಲ್ ಬರುವುದಿಲ್ಲ ಎಂದು ಅವರು ಬಿಎಸ್ ಎನ್ ಎಲ್ ವಿರುದ್ಧ ಹರಿಹಾಯ್ದರು ಎನ್ನಲಾಗಿದೆ.
ಬಿಎಸ್ ಎನ್ ಎಲ್ ಇಡೀ ದೇಶಕ್ಕೆ ಕಳಂಕವಾಗಿದೆ. ಹೀಗಾಗಿ ಅದನ್ನು ಮುಗಿಸುತ್ತಿದ್ದೇವೆ. ಅದರ ಹೂಡಿಕೆ ಹಿಂತೆಗೆವ ನೀತಿ ಮೂಲಕ ಮುಗಿಸುತ್ತಿದ್ದೇವೆ. ಬಹುತೇಕ ಖಾಸಗಿ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಆ ಜಾಗವನ್ನು ತುಂಬಿಕೊಳ್ಳಲಿದ್ದಾರೆ. ಇದನ್ನು ಸರಿ ಪಡಿಸಲು ಸಾಧ್ಯವಾಗಿಲ್ಲ. ಅಷ್ಟೊಂದು ಜಿಡ್ಡು ಹಿಡಿದು ಹೋಗಿದೆ. ನಮ್ಮ ಸರಕಾರಕ್ಕೂ ಆಗಿಲ್ಲ ಎಂದರೆ ಯೋಚನೆ ಮಾಡಿ ಎಷ್ಟು ಜಿಡ್ಡು ಹಿಡಿದಿರಬಹುದು ಎಂದು ಅವರು ಹೇಳಿದ್ದಾರೆ. ದೇಶದ್ರೋಹಿಗಳೇ ತುಂಬಿಕೊಂಡಿರುವ ವ್ಯವಸ್ಥೆ ಇದಾಗಿದೆ. ಈ ಶಬ್ದದಲ್ಲಿ ನಿಖರತೆ ಇದೆ. ಮೊನ್ನೆ ಕಾರವಾರದಲ್ಲಿ ನಡೆದ ಸಭೆಯಲ್ಲಿ ಕೂಡ ಇದೇ ಶಬ್ದ ಬಳಸಿ ಅಧಿಕಾರಿಗಳನ್ನು ಬೈದಿದ್ದೇನೆ. ನೀವು ಸರಕಾರಿ ಅಧಿಕಾರಿಗಳಲ್ಲ. ದೇಶದ್ರೋಹಿಗಳು. ಸರಕಾರ ಹಣಕೊಡುತ್ತಿದೆ. ಜನರಿಗೆ ಅಗತ್ಯವಿದೆ. ಮೂಲ ಸೌಕರ್ಯವೂ ಇದೆ. ಎಲ್ಲವೂ ಇದೆ. ಆದರೂ ಕೆಲಸ ಮಾಡುತ್ತಿಲ್ಲ ಎಂಬುದಾಗಿ ಹೆಗಡೆ ಕಿಡಿಗಾರಿದ್ದಾರೆ ಎಂದು ವರದಿ ತಿಳಿಸಿದೆ.