ಮಂಗಳೂರು : ಮಾಜಿ ಶಾಸಕ ಮೊಯ್ದಿನ್ ಬಾವಾ ಮತಾಂಧರ ಬೆದರಿಕೆಗೆ ಜಗ್ಗದೆ ಬಜ್ಪೆಯ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ನವರಾತ್ರಿ ಹಿನ್ನೆಲೆಯಲ್ಲಿ ಬಜ್ಪೆಯ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮೊಯ್ದಿನ್ ಬಾವಾ ತಮ್ಮ ಪೂಜೆ ಸಲ್ಲಿಸಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಕೆಲದಿನಗಳ ಹಿಂದೆ ಮೊಯ್ದಿನ್ ಬಾವಾ ಇದೇ ದೇವಸ್ಥಾನದ ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ತೆರಳಿ, ದೇಗುಲದ ಸಂಸ್ಕೃತಿಯಂತೆ ಕೊಪ್ಪರಿಗೆ ಸಲ್ಲಿಸಿದ್ದರು.
ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದುದಕ್ಕೆ ಕೆಲವು ಹಿಂದೂ ಮೂಲಭೂತವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅದರಲ್ಲಿ ಒಬ್ಬ ಮೊಯ್ದಿನ್ ಅವರಿಗೆ ಕರೆ ಮಾಡಿ ಬೆದರಿಕೆಯನ್ನೂ ಹಾಕಿದ್ದ ಘಟನೆ ನಡೆದಿತ್ತು. ತಾನು ಮುಂಬೈಯವನೆಂದು ಹೇಳಿಕೊಂಡಿದ್ದ ಕರೆದಾರ, ತನ್ನ ಹೆಸರನ್ನು ಅನಿಲ್ ಎಂದು ಪರಿಚಯಿಸಿಕೊಂಡಿದ್ದ.
ತುಳುವಿನಲ್ಲೇ ಮಾತನಾಡಿದ್ದ ಆತ, ದೇವಸ್ಥಾನಕ್ಕೆ ಹೋಗಿದ್ದುದನ್ನು ಪ್ರಶ್ನಿಸಿದ್ದ. ದೇವಸ್ಥಾನದ ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಹೋಗಿದ್ದುದಾಗಿ ಮೊಯ್ದಿನ್ ತಿಳಿಸಿದಾಗ, ಅವರು ಮರ್ಯಾದೆಗೆ ಕರೆದರೆ, ನೀವು ಯಾಕೆ ಹೋಗಿದ್ದು, ಬರುವುದಿಲ್ಲ ಎನ್ನಬೇಕಿತ್ತು ಎಂದು ಹೇಳಿದ್ದನೆನ್ನಲಾಗಿದೆ.
ಇದು ನೆಹರೂ ದೇಶವಲ್ಲ, ಇದು ನರೇಂದ್ರ ಮೋದಿ ದೇಶ ಗೊತ್ತಾಯಿತಲ್ಲ… ಇನ್ನು ಮುಂದೆ ಏನಾದ್ರು ಗೋಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ.. ಎಂದು ಬೆದರಿಕೆಯೊಡ್ಡಿದ್ದಾನೆನ್ನಲಾಗಿದೆ. ಈ ಸಂಬಂಧ ದೂರು ದಾಖಲಿಸಿದ್ದರು. ಅದರ ಬೆನ್ನಲ್ಲೇ ದೇವಸ್ಥಾನ ಆಡಳಿತ ಮಂಡಳಿ ಮತ್ತೊಮ್ಮೆ ಮೊಯ್ದಿನ್ ಅವರನ್ನು ದೇವಸ್ಥಾನಕ್ಕೆ ಆಹ್ವಾನಿಸಿತ್ತು. ಹೀಗಾಗಿ ಭಾನುವಾರ ಮತ್ತೆ ಅವರು ದೇವಸ್ಥಾನಕ್ಕೆ ತೆರಳಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ದೇವಸ್ಥಾನದ ಬ್ರಹ್ಮ ಕಲಶೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲೂ ದೇವಸ್ಥಾನ ಆಡಳಿತ ಮಂಡಳಿ ಮತ್ತೆ ಆಹ್ವಾನ ನೀಡಿದೆ. ಬೆದರಿಕೆ ಕರೆ ಮಾಡಿ ಸಮಾಜದಲ್ಲಿ ಅಶಾಂತಿ ಎಬ್ಬಿಸುವವರಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ ಎಂದು ಮೊಯ್ದಿನ್ ಬಾವಾ ಪ್ರಾರ್ಥಿಸಿದ್ದಾರೆ.