ಮತದಾನ ಮಾಡದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು: ಮುಸ್ಲಿಮರಿಂದ ಗಂಭೀರ ಆರೋಪ

Prasthutha|

ಉ.ಪ್ರದೇಶ: ದೇಶದಲ್ಲಿ ಮೂರನೇ ಹಂತದ ಚುನಾವಣೆ ಇಂದು ನಡೆದಿದ್ದು, 93 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. ಇದರ ಜೊತೆಗೆ ಅತಿ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಉತ್ತರ ಪ್ರದೇಶದ ಸಂಭಾಲ್ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಮತದಾನ ಮಾಡದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ ತಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

- Advertisement -

ನಾವು ಮತ ಹಾಕಲು ಮತಗಟ್ಟೆಗೆ ತೆರಳಿದಾಗ ನಮ್ಮನ್ನು ಮತ ಹಾಕದಂತೆ ಪೊಲೀಸರು ಹಾಗೂ ಕೆಲ ಮತಗಟ್ಟೆ ಅಧಿಕಾರಿಗಳು ತಡೆದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಲಾಠಿ ಏಟು ಕೊಟ್ಟು ಓಡಿಸುತ್ತಿದ್ದಾರೆ. ನಮ್ಮ ಗುರುತಿನ ಚೀಟಿ ಮತ್ತು ಮತದಾನದ ರಸೀದಿಗಳನ್ನು ಕಸಿದುಕೊಳ್ಳಲಾಗಿದೆ ಎಂದು ಮುಸ್ಲಿಮ್‌ ಮತದಾರರು ಹೇಳುವ ವೀಡಿಯೊಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿವೆ

ಅಲ್ಲದೆ, ಸಮಾಜವಾದಿ ಪಕ್ಷ ತನ್ನ ಅಧಿಕೃತ X ಖಾತೆಯಲ್ಲಿ ವೀಡಿಯೊಗಳೆರಡನ್ನು ಹಂಚಿಕೊಳ್ಳಲಾಗಿದೆ. ಒಂದರಲ್ಲಿ, ಪೋಲಿಸರ ಲಾಠಿ ಚಾರ್ಜ್‌ನಿಂದಾಗಿ ಕೆಲವು ವಯೋವೃದ್ಧ ಮತದಾರರು ಪ್ರಜ್ಞಾಹೀನರಾಗಿರುವುದನ್ನು ಮತ್ತು ಅವರನ್ನು ಎತ್ತಿಕೊಂಡು ಹೋಗುವುದು, ಕೆಲವು ಮತದಾರರಿಗೆ ಮೂಗಿಗೆ ಏಟು ಬಿದ್ದು ಗಾಯಗಳು ಆಗಿರುವುದನ್ನು ಆ ದೃಶ್ಯ ತೋರಿಸುತ್ತದೆ. ನಮ್ಮನ್ನು ಮತದಾನ ಮಾಡದಂತೆ ತಡೆಯಲಾಗಿದೆ ಎಂದು ಮುಸ್ಲಿಮರು ಹೇಳುವುದನ್ನು ಮತ್ತೊಂದು ವೀಡಿಯೊ ತೋರಿಸುತ್ತದೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಸಂಭಾಲ್‌ನಲ್ಲಿ ಪೊಲೀಸರು ಜನರನ್ನು ಥಳಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ನಾನು ತಿಳಿದಿದ್ದೇನೆ. ಪೊಲೀಸ್ ಮತ್ತು ಸರಕಾರದ  ಈ ನಡವಳಿಕೆ ಸರಿಯಲ್ಲ. ಬಿಜೆಪಿ ನಿರ್ನಾಮವಾಗಲಿದೆ. ಜನರು ಹೊರಗೆ ಬಂದು ಮತ ಚಲಾಯಿಸಿ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾನು ಮನವಿ ಮಾಡಲು ಬಯಸುತ್ತೇನೆ. ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

Join Whatsapp