ಬೆಂಗಳೂರು: ಚಾಕೋಲೆಟ್ ಕೊಡಿಸುವುದಾಗಿ ಕರೆದೊಯ್ದು ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ ಆನೇಕಲ್ ತಾಲ್ಲೂಕು ಸತ್ರ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ನೇಪಾಳ ಮೂಲದ ಆರೋಪಿ ಲೋಕನಾಥ್ ಬಹದ್ದೂರ್, ಅತ್ತಿಬೆಲೆಯಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿದ್ದು 2017 ರಲ್ಲಿ ಅತ್ತಿಬೆಲೆಯ ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿಗೆ ಚಾಕೋಲೆಟ್ ಕೊಡಿಸುವುದಾಗ ಅಪಹರಿಸಿ ಅತ್ಯಾಚಾರ ನಡೆಸಿದ್ದ.
ಅತ್ತಿಬೆಲೆಯ ತನ್ನ ರೂಂಗೆ ಕರೆದೊಯ್ದು ಮಗುವಿನ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದ. ಮಗು ಅಳುವುದಕ್ಕೆ ಶುರು ಮಾಡುತ್ತಿದ್ದಂತೆ ಮಗುವಿನ ಸಮೇತ ಆರೋಪಿ ಚೆನ್ನೈಗೆ ಪರಾರಿಯಾಗಿದ್ದ ಮಗು ಕಾಣೆಯಾದ ಹಿನ್ನೆಲೆಯಲ್ಲಿ ಮಗುವಿನ ಪೊಷಕರು ಅತ್ತಿಬೆಲೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಆರೋಪಿಯ ಜಾಡನ್ನು ಬೆನ್ನತ್ತಿದ ಪೊಲೀಸರಿಗೆ ಆರೋಪಿ ಚೆನ್ನೈನಲ್ಲಿ ಅಡಗಿರುವುದು ಗೊತ್ತಾಗಿತ್ತು. ಆರೋಪಿಯು ಚೆನ್ನೈನಲ್ಲಿದ್ದ ನೇಪಾಳ ಮೂಲದವರಿಗೆ ಮಗುವನ್ನು ಕೊಟ್ಟಿದ್ದ. ನಗರಕ್ಕೆ ಬಾರದೇ ಚೆನ್ನೈನಲ್ಲಿ ಅಡ್ಡಾಡಿಕೊಂಡಿದ್ದ ಆರೋಪಿಯನ್ನು ಅಂದಿನ ಅತ್ತಿಬೆಲೆ ಇನ್ಸ್ ಪೆಕ್ಟರ್ ಎಲ್.ವೈ. ರಾಜೇಶ್ ಮತ್ತು ತಂಡ ಚೆನ್ನೈನಿಂದ ಬಂಧಿಸಿ ಕರೆತಂದಿತ್ತು.
ವೈಜ್ಞಾನಿಕ ಪುರಾವೆಯಲ್ಲಿ ಆರೋಪಿ ಮಗುವಿನ ಮೇಲೆ ಅತ್ಯಾಚಾರ ಎಸಗಿರುವುದು ಸಾಬೀತಾಗಿತ್ತು. ಕೃತ್ಯ ನಡೆದು ಐದು ವರ್ಷಗಳ ಸುದೀರ್ಘ ವಿಚಾರಣೆ ನಂತರ ಆರೋಪಿಗೆ 10 ವರ್ಷ ಸಜೆ ಹಾಗೂ ಐದು ಸಾವಿರ ದಂಡ ವಿಧಿಸಲಾಗಿದೆ. ಆನೇಕಲ್ ತಾಲ್ಲೂಕು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ್ ಅವರು ಈ ಆದೇಶ ಹೊರಡಿಸಿದ್ದಾರೆ.