ಮೈಸೂರು : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹೋರಾಟದ ಭಾಗವಾಗಿ ಸ್ವಾತಂತ್ರ್ಯ ದಿನಾಚರಣೆ ಮುನ್ನಾ ಆ.14ರ ಮಧ್ಯರಾತ್ರಿಯಿಂದ ಬೆಂಗಳೂರಿನಲ್ಲಿ ತಮಟೆ ಚಳವಳಿ ಮತ್ತು ಪಂಜಿನ ಮೆರವಣಿಗೆ ನಡೆಸಲಾಗುತ್ತದೆ ಎಂದು ರೈತ ನಾಯಕರು ತಿಳಿಸಿದ್ದಾರೆ.
ರೈತ ಸಂಘ, ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಈ ಕುರಿತು ಮಾಹಿತಿ ನೀಡಿದರು.
ಆ.8ರಂದು ಭೂಮಿ ಮಾರಾಟಕ್ಕಿಲ್ಲ ಎಂದು ಶಪಥ ಮಾಡಿ, ನಮ್ಮ ಭೂಮಿ ನಮ್ಮ ಹಕ್ಕು, ಅನ್ಯರಿಗೆ ಮಾರಾಟವಿಲ್ಲ ಎಂಬ ಭಿತ್ತಿಚಿತ್ರಗಳ ಪ್ರದರ್ಶನದ ಕಾರ್ಯಕ್ರಮ ಆರಂಭಿಸಲಾಗಿದೆ. ತಮ್ಮ ಊರಿನ ಮುಂದೆ ಇಂತಹ ಭಿತ್ತಿಚಿತ್ರಗಳನ್ನು ಹಾಕುವ ಮೂಲಕ, ನಮ್ಮೂರಿಗೆ ಬರಬೇಡಿ, ತೊಲಗಿ ಎಂದು ಹೇಳುವ ಕಾರ್ಯಕ್ರಮ ಆರಂಭವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಆ.29ರಂದು ಆಯಾ ಜಿಲ್ಲೆಗಳ ಪದಾಧಿಕಾರಿಗಳು ರೈತರೊಂದಿಗೆ ವಿಚಾರ ಸಂಕಿರಣವನ್ನು ಸಹ ನಡೆಸಲಾಗುವುದು ಎಂದು ನಾಗೇಂದ್ರ ತಿಳಿಸಿದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಯ ಗುರುಪ್ರಸಾದ್ ಕೆರಗೋಡು, ರೈತ ಮುಖಂಡರು, ದಲಿತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.