ನವದೆಹಲಿ: “ಪೂರ್ವ ಲಡಾಖ್ ನಲ್ಲಿ ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ವೇಳೆ ಏಳು ತಿಂಗಳಿನಿಂದ ಭಾರತವನ್ನು ಪರೀಕ್ಷಿಸಲಾಗುತ್ತಿದೆ. ಸಂದರ್ಭಕ್ಕನುಗುಣವಾಗಿ ಭಾರತ ಎದ್ದುನಿಂತು ರಾಷ್ಟ್ರೀಯ ಭದ್ರತೆಯ ಸವಾಲನ್ನು ಎದುರಿಸಲಿದೆ ಎಂಬ ವಿಶ್ವಾಸವಿದೆ” ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(ಎಫ್ಐಸಿಸಿಐ) ವಾರ್ಷಿಕ ಸಭೆಯ ಸಂವಾದದಲ್ಲಿ ಮಾತನಾಡಿದ ಅವರು, “ಗಡಿಯಲ್ಲಿ ನಡೆದಿರುವುದು ವಾಸ್ತವವಾಗಿ ಚೀನಾದ ಆಸಕ್ತಿಯೂ ಆಗಿಲ್ಲ. ಆದರೆ ಚೀನಾ ಅಲ್ಲಿ ಮಾಡಿರುವುದು ಭಾರತದ ಸಾರ್ವಜನಿಕರ ಭಾವನೆಗಳ ಮೇಲೆ ದೊಡ್ಡ ಪ್ರಮಾಣದ ಪ್ರಭಾವ ಬೀರಿದೆ. ಕಳೆದ ಅನೇಕ ದಶಕಗಳಲ್ಲಿ ಭಾರತದ ಜನರು ಚೀನಾ ಬಗೆಗಿನ ಭಾವನೆಯನ್ನು ಯಾವ ರೀತಿ ಬದಲಿಸಿಕೊಂಡಿದ್ದಾರೆ ಎಂದು ನಾನು ನೋಡಿದ್ದೇನೆ” ಎಂದು ಹೇಳಿದ್ದಾರೆ.
ಗಡಿ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ನಡೆದ ಘಟನೆಗಳು ಹಲವು ಸಾಮಾನ್ಯ ಆತಂಕಗಳನ್ನು ಹುಟ್ಟುಹಾಕಿವೆ ಎಂದು ತಿಳಿಸಿದ್ದಾರೆ.
ಈ ತಿಕ್ಕಾಟಕ್ಕೆ ತಾತ್ಕಾಲಿಕ ಅಥವಾ ಪೂರ್ಣ ವಿರಾಮ ಬೀಳುವ ನಿರೀಕ್ಷೆಗಳು ಇವೆಯೇ ಎಂದು ಪ್ರಶ್ನಿಸಿದಾಗ, “ಅಲ್ಲಿ ಸುಲಭವಾಗಿ ಎಲ್ಲವೂ ಮುಗಿಯಲಿದೆಯೋ, ಇಲ್ಲವೋ ಎಂದು ಭವಿಷ್ಯ ನುಡಿಯುವ ಸ್ಥಾನದಲ್ಲಿ ನಾನಿಲ್ಲ. ಅದಕ್ಕೆ ಕಾಲವೇ ಉತ್ತರ ನೀಡಲಿದೆ” ಎಂದು ಪ್ರತಿಕ್ರಿಯಿಸಿದರು.