ಚೆನ್ನೈ : ‘ಪವಿತ್ರ ಭಾರತ’ ಈಗ ಅತ್ಯಾಚಾರಿಗಳ ಭೂಮಿಯಾಗಿ ಮಾರ್ಪಟ್ಟಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. 15 ನಿಮಿಷಗಳಿಗೆ ಒಂದು ಅತ್ಯಾಚಾರ ನಡೆಯುತ್ತಿದೆ. ದೇಶದಲ್ಲಿ ಮಹಿಳೆಯರು ಅಸುರಕ್ಷಿತರಾಗಿದ್ದಾರೆ. ಪರಿಸ್ಥಿತಿ ತುಂಬಾ ನಿರಾಶಾದಾಯಕವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಕಿರುಬಾಕರನ್ ಹೇಳಿದ್ದಾರೆ. ಅವರ ಈ ಪ್ರತಿಕ್ರಿಯೆ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಚಿತ್ರಣವನ್ನು ಎತ್ತಿ ತೋರಿಸುತ್ತಿದೆ.
ತ್ರಿಪುರಾದಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಅಫಿದವಿತ್ ನ್ನು ಪರಿಗಣಿಸುವ ಸಮಯದಲ್ಲಿ ನ್ಯಾಯಾಮೂರ್ತಿಗಳು ಈ ಹೇಳಿಕೆ ನೀಡಿದ್ದಾರೆ. ಅಸ್ಸಾಂ ಮೂಲದ 22 ವರ್ಷದ ಮಹಿಳಾ ಕಾರ್ಮಿಕಳನ್ನು ಕೆಲಸ ಕೊಡಿಸುವ ನೆಪದಲ್ಲಿ ಪಲ್ಲಡಂ ಎಂಬ ಪ್ರದೇಶದಲ್ಲಿ ಸ್ಥಳೀಯ ಐದು ಯುವಕರು ಅತ್ಯಾಚಾರ ಎಸಗಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಕೋರಿ ಹಿರಿಯ ವಕೀಲ ಎಪಿ ಸೂರ್ಯಪ್ರಕಾಶ್ ಅವರು ಅಫಿದವಿತ್ ಸಲ್ಲಿಸಿದ್ದರು. ನ್ಯಾಮೂರ್ತಿಗಳಾದ ಎನ್.ಕಿರುಬಾಕರನ್ ಮತ್ತು ಪಿ. ವೇಲ್ಮುರುಗನ್ ಅವರೊನ್ನೊಳಗೊಂಡ ನ್ಯಾಯಪೀಠ ಈ ಘಟನೆಯ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಡಿಜಿಪಿಗೆ ನಿರ್ದೇಶನ ನೀಡಿತು. ವಲಸೆ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡದ ಕಾರಣ ಅವರಿಗೆ ರಕ್ಷಣೆ ಇಲ್ಲ ಮತ್ತು ಅವರು ಅತ್ಯಂತ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂದು ವೇಲ್ಮುರುಗನ್ ಹೇಳಿದರು.