ಸಂಸತ್ತಿನಲ್ಲಿ ರೈತರನ್ನು ಅಪಹಾಸ್ಯ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ರೈತ ಸಂಘಟನೆಗಳು ಪ್ರತಿಕ್ರಿಯಿಸಿದೆ. ರಾಜ್ಯಸಭೆಯಲ್ಲಿ ನಡೆಸಿದ ಭಾಷಣದಲ್ಲಿ ಹೊಸ ವರ್ಗದ ಆಂದೋಲನ ಜೀವಿಗಳು ದೇಶದಲ್ಲಿ ಹುಟ್ಟಿಕೊಂಡಿದ್ದಾರೆ ಎಂದು ಹೇಳಿದ್ದರು.
ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಮುಕ್ತಗೊಳಿಸಿರುವುದು ಆಂದೋಲನ ಜೀವಿಗಳಾಗಿದ್ದಾರೆ. ಆದ್ದರಿಂದ ರೈತರನ್ನು ಆಂದೋಲನ ಜೀವಿಗಳೆಂದು ಹೇಳಿರುವುದರಲ್ಲಿ ನಮಗೆ ಹೆಮ್ಮೆಯಿದೆ ಎಂದು ಜಂಟಿ ಕಿಸಾನ್ ಮೋರ್ಚಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಬಿಜೆಪಿ ಮತ್ತು ಅದರ ಪೂರ್ವವರ್ತಿಗಳು ಬ್ರಿಟಿಷರ ವಿರುದ್ಧದ ಆಂದೋಲನದಲ್ಲಿ ಭಾಗವಹಿಸಲಿಲ್ಲ. ಸರ್ಕಾರದ ದುರಹಂಕಾರವು ಸುದೀರ್ಘ ಆಂದೋಲನಕ್ಕೆ ಕಾರಣವಾಗಿದೆ ಎಂದು ಕಿಸಾನ್ ಮೋರ್ಚಾ ಹೇಳಿದೆ.
ಸೋಮವಾರ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಮೋದಿ ರೈತರ ಹೋರಾಟದ ಕುರಿತು ಮಾತನಾಡಿದ್ದರು. ಎಲ್ಲೆಲ್ಲಿ ಪ್ರತಿಭಟನೆ ನಡೆದರೂ ಅಲ್ಲಿ ಆಂದೋಲನ ಜೀವಿಗಳನ್ನು ಕಾಣಬಹುದು. ಅವರಿಗೆ ಹೋರಾಟವಿಲ್ಲದೆ ಬದುಕಲು ಸಾಧ್ಯವಿಲ್ಲ. ಈ ಜನರನ್ನು ಗುರುತಿಸಬೇಕು ಮತ್ತು ದೇಶವನ್ನು ಅವರಿಂದ ರಕ್ಷಿಸಬೇಕು ಎಂದು ಮೋದಿ ಅಪಹಾಸ್ಯ ಮಾಡಿದ್ದರು.