ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿ ಹಿಂದೂ ರಾಷ್ಟ್ರೀಯತಾವಾದಿ ಅಜೆಂಡಾವನ್ನು ಅನುಸರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಭಾರತೀಯ ಮಾನವ ಹಕ್ಕುಗಳ ಸಂಘಟನೆಯಾದ ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ. ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟಿಸಿದವರನ್ನು ದಮನಿಸಿದಂತೆ ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನೂ ಹತ್ತಿಕ್ಕಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್‌ನ ದಕ್ಷಿಣ ಏಷ್ಯಾದ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಹೇಳಿದ್ದಾರೆ.
ತುಳಿತಕ್ಕೊಳಗಾಗಿರುವ ದಲಿತ ಮತ್ತು ಆದಿವಾಸಿ ಸಮುದಾಯಗಳ ರಕ್ಷಣೆಗಾಗಿ ಕರೆ ನೀಡುವವರು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವವರು ರಾಜಕೀಯ ಪ್ರೇರಿತ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈಗ, ನವೆಂಬರ್‌ನಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೂಡ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಪತ್ರಕರ್ತರು ಮತ್ತು ಹಿರಿಯ ರಾಜಕಾರಣಿಗಳ ವಿರುದ್ಧ ಆಧಾರರಹಿತ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತಿದೆ. ಸರಕಾರದ ಬೆಂಬಲಿಗನಾದ ಪತ್ರಕರ್ತನನ್ನು ಕ್ರಿಮಿನಲ್ ಪ್ರಕರಣವೊಂದರಲ್ಲಿ ಬಂಧಿಸಿದಾಗ ಬಿಜೆಪಿ ನಾಯಕರ ಆಜ್ಞೆಯ ಮೇರೆಗೆ ಬಿಡುಗಡೆ ಮಾಡಲಾಯಿತು.
ಉತ್ತರಪ್ರದೇಶದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ವರದಿ ತಯಾರಿಸಲು ಆಗಮಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ ಜಾಮೀನು ನಿರಾಕರಿಸಿದ ಅದೇ ನ್ಯಾಯಾಲಯವು ಸರಕಾರದ ಬೆಂಬಲಿಗನಾದ ಪತ್ರಕರ್ತನಿಗೆ ಜಾಮೀನು ನೀಡಿದೆ. ಭಾರತದ ರಾಜಕಾರಣಿಗಳು ದೇಶದ ಪ್ರಜಾಪ್ರಭುತ್ವ ಮತ್ತು ಬಹುತ್ವವನ್ನು ಸ್ವಯಂ ಹೊಗಳುವವರಾಗಿದ್ದಾರೆ. ಆದರೆ, ಅವರ ಎಲ್ಲಾ ಪ್ರವೃತ್ತಿಗಳು ಇದಕ್ಕೆ ವಿರುದ್ಧವಾಗಿವೆ ಎಂದು ದಕ್ಷಿಣ ಏಷ್ಯಾದ ಹ್ಯೂಮನ್ ರೈಟ್ಸ್ ವಾಚ್ ನಿರ್ದೇಶಕರು ಹೇಳಿದ್ದಾರೆ.