ಕೊರೊನಾ ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ ಸಾಮಾನ್ಯ ಜನ ಉದ್ಯೋಗವಿಲ್ಲದೆ, ಉದ್ಯಮಿಗಳು ಉತ್ಪಾದನೆ ಇಲ್ಲದೆ ಕಷ್ಟ-ನಷ್ಟಕ್ಕೀಡಾಗಿದ್ದಾರೆ. ಪೆಟ್ರೋಲ್ ಬೆಲೆ 100 ರೂಗಳನ್ನು ದಾಟಿದೆ. ಕಳೆದ ಒಂದೂವರೆ ವರ್ಷದಿಂದ ಈಚೆಗೆ ಸುಮಾರು ಒಂದು ಲೀಟರ್ಗೆ 30 ರೂಗಳಷ್ಟು ಬೆಲೆ ಜಾಸ್ತಿ ಆಗಿದೆ. 2014 ರಲ್ಲಿ 400 ರೂಗಳಿದ್ದ ಅಡುಗೆ ಅನಿಲದ ಸಿಲಿಂಡರ್ ಬೆಲೆ ಈಗ 850 ರೂ ಆಗಿದೆ. ಈ ಕಾಲದಲ್ಲಿ ನೆರವಿಗೆ ಬರಬೇಕಾಗಿದ್ದ ರಾಜ್ಯದ ಬಿಜೆಪಿ ಸರ್ಕಾರ ನಿರ್ದಯವಾಗಿ ವಿದ್ಯುತ್ ಶುಲ್ಕ ಹೆಚ್ಚಿಸಿ ಹಸಿಗಾಯದ ಮೇಲೆ ಬರೆ ಎಳೆದಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಿದ್ಯುತ್ ದರ 200-300 ಪಟ್ಟು ಹೆಚ್ಚಿದೆ. ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನೀಡಿರುವ ಕಾರಣಗಳು ಜನರನ್ನು ತಪ್ಪುದಾರಿಗೆಳೆಯುವಂತಿದೆ. ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳು ಇಂದು ನಷ್ಟದಲ್ಲಿದ್ದರೆ ಅದಕ್ಕೆ ರಾಜ್ಯ ಸರ್ಕಾರದ ಅದಕ್ಷತೆ, ಭ್ರಷ್ಟಾಚಾರ ಮತ್ತು ಕಾರ್ಪೋರೇಟ್ ಕಂಪೆನಿಗಳ ಓಲೈಕೆ ಕಾರಣ. ಸಮರ್ಥನೀಯವಲ್ಲದ, ಅವೈಜ್ಞಾನಿಕ ಮತ್ತು ಜನವಿರೋಧಿಯಾಗಿರುವ ವಿದ್ಯುತ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ತಕ್ಷಣ ಹಿಂದಕ್ಕೆ ಪಡೆಯದಿದ್ದರೆ ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿನ ವಿದ್ಯುತ್ ಕ್ಷೇತ್ರದ ಸುಧಾರಣೆ ಮತ್ತು ಕಾರ್ಯಗತಗೊಳಿಸಿದ ಹೊಸ ಯೋಜನೆಗಳಿಂದಾಗಿ ಕರ್ನಾಟಕ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿತ್ತು. ರಾಜ್ಯದಲ್ಲಿ ಸುಮಾರು 30 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ವಿದ್ಯುತ್ ಬಳಕೆ ಆಗುತ್ತಿರುವುದು ಕೇವಲ 8.5 ಸಾವಿರದಿಂದ 10 ಸಾವಿರ ಮೆಗಾವ್ಯಾಟ್ ಮಾತ್ರ. ಒಟ್ಟು ವಿದ್ಯುತ್ ಉತ್ಪಾದನೆಯ ಮೂರನೇ ಎರಡು ಭಾಗದಷ್ಟು ಸೋಲಾರ್ ಮತ್ತು ಗಾಳಿಯ ಮೂಲದಿಂದ ಇಂಧನ ಲಭ್ಯವಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆಯಿಂದಾಗಿ ರಾಯಚೂರು ಉಷ್ಣವಿದ್ಯುತ್ ಸ್ಥಾವರದ ಉತ್ಪಾದನೆಯನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು. ಹೀಗಿರುವಾಗ ಬೇರೆ ಕಡೆಯಿಂದ ವಿದ್ಯುತ್ ಖರೀದಿಸುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ವಿದ್ಯುತ್ ದರವನ್ನು ಇಳಿಸಿ ವಿದ್ಯುತ್ ಬಳಕೆಗೆ ಪ್ರೊತ್ಸಾಹ ನೀಡಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ವಿದ್ಯುತ್ ಬಳಕೆ ಕಡಿಮೆಯಾಗುತ್ತಿದೆ. ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಯದ್ವಾತದ್ವಾ ಹೆಚ್ಚಿಸಿ ವಿದ್ಯುತ್ ಬಳಕೆದಾರರಿಗೆ ದಂಡ ವಿಧಿಸುವುದು ಸರಿ ಅಲ್ಲ. ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳು ಇಂದು ನಷ್ಟದಲ್ಲಿದ್ದರೆ ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ವಹಿಸಬೇಕಾಗುತ್ತದೆ.ರಾಜ್ಯದ ಬಿಜೆಪಿ ಸರ್ಕಾರ ಯುನಿಟ್ ಗೆ ಹೆಚ್ಚುವರಿ 50 ಪೈಸೆ ನೀಡಿ ಕೇಂದ್ರ ಸರ್ಕಾರದಿಂದ ವಿದ್ಯುತ್ ಖರೀದಿಸುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 5-6 ಸಾವಿರ ಕೋಟಿ ರೂಪಾಯಿ ಹೊರೆಯಾಗುತ್ತಿದೆ. ಈ ಪೋಲಾಗುತ್ತಿರುವ ಈ ಹಣವನ್ನು ಉಳಿಸಿದರೆ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳನ್ನು ನಷ್ಟದಿಂದ ಪಾರುಮಾಡಬಹುದು ಎಂದು ತಿಳಿಸಿದ್ದಾರೆ.
ಅದಾನಿ ಮೊದಲಾದ ಕಾರ್ಪೋರೇಟ್ ಕಂಪನಿಗಳು ಹಾಗೂ ಕೇಂದ್ರದ ಗ್ರಿಡ್ ಗಳಿಂದ ರಾಜ್ಯ ಸರ್ಕಾರ 38594 ಮಿಲಿಯನ್ ಯೂನಿಟ್ ಗಳನ್ನು ಖರೀದಿಸುತ್ತಿದೆ. ಆದರೆ ಬಳಕೆ ಮಾಡುತ್ತಿರುವುದು ಮಾತ್ರ ಕೇವಲ 19921 ಮಿಲಿಯನ್ ಯೂನಿಟ್ಗಳು. ಇದಕ್ಕಾಗಿ ರಾಜ್ಯ ಸರ್ಕಾರ 4388 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ. ಒಟ್ಟಾರೆಯಾಗಿ ಲೆಕ್ಕ ಹಾಕಿದರೆ ಎಲ್ಲಾ ಮೂಲಗಳಿಂದ ಪಾವತಿಸಬೇಕಾದ ಮೊತ್ತಕ್ಕಿಂತ 5460 ಕೋಟಿ ರೂಪಾಯಿಗಳನ್ನು ಹೆಚ್ಚಿಗೆ ಪಾವತಿಸಲಾಗುತ್ತಿದೆ. ಕಷ್ಟದಲ್ಲಿರುವ ಜನರಿಂದ ಕಿತ್ತುಕೊಂಡು ಕಾರ್ಪೋರೇಟ್ ಕಂಪೆನಿಗಳನ್ನು ಉದ್ದಾರ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಅದೇ ರೀತಿ ಕೆಪಿಟಿಸಿಎಲ್ ವತಿಯಿಂದ ಸರಬರಾಜು ಮಾಡುವ ವಿದ್ಯುತ್ ಗಾಗಿ 20 ಸಾವಿರ ರೂಪಾಯಿಗಳನ್ನು ಹೆಚ್ಚು ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಮಹಾರಾಷ್ಟ್ರ, ಪಂಜಾಬ್ ಮುಂತಾದ ರಾಜ್ಯಗಳು ತಮ್ಮ ರಾಜ್ಯದ ಗ್ರಿಡ್ಗಳಿಗೆ ಸರಬರಾಜು ಆದ ನಂತರದ ವಿದ್ಯುತ್ಗೆ ಮಾತ್ರ ಶುಲ್ಕವನ್ನು ಪಾವತಿಸುತ್ತಿವೆ ರಾಜ್ಯದ ವಿದ್ಯುಚ್ಛಕ್ತಿ ಇಲಾಖೆ ಮಾತ್ರ ಖರೀದಿ ಮಾಡುವ ಕಂಪೆನಿಗಳಿಗೆ ಉತ್ಪಾದನೆ ಮಾಡುವ ಸ್ಥಳದಿಂದಲೇ ಸರಬರಾಜು ಶುಲ್ಕವನ್ನು ಪಾವತಿಸುತ್ತಿದೆ. ಇದರಿಂದ ರಾಜ್ಯ ಸರ್ಕಾರವು 3037 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ಪಾವತಿಸಲಾಗುತ್ತಿದೆ. ಬೇರೆ ರಾಜ್ಯಗಳಂತೆ ಸರಬರಾಜು ಮಾಡಿದ ನಂತರದ ವಿದ್ಯುತ್ ಗೆ ಮಾತ್ರ ಶುಲ್ಕ ಪಾವತಿಸಿದರೆ ಸುಮಾರು 1252 ಕೋಟಿ ರೂಪಾಯಿ ಉಳಿಸಲು ಸಾಧ್ಯವಿದೆ. ಈಗಲೂ ಕಾಲ ಮಿಂಚಿಲ್ಲ. ವಿದ್ಯುಚ್ಛಕ್ತಿ ಕುರಿತಾದ ಪರಿಣತರು, ವಿರೋಧ ಪಕ್ಷಗಳ ಮುಖಂಡರ ಸಭೆಯನ್ನು ಕರೆದು ವಿದ್ಯುಚ್ಛಕ್ತಿ ದರಗಳನ್ನು ಕಡಿಮೆ ಮಾಡುವುದು ಹೇಗೆ ಎಂದು ಸಲಹೆಗಳನ್ನು ಪಡೆಯಬೇಕು. ಅಲ್ಲಿಯವರೆಗೆ ವಿದ್ಯುಚ್ಛಕ್ತಿ ದರಗಳನ್ನು ಹೆಚ್ಚಿಸಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.