ಪೊಲೀಸ್ ಜೀಪ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪರಿಣಾಮ ಎಸ್.ಐ ಹಾಗೂ ಚಾಲಕ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ ಸಂಜೀವ್ ಹಾಗೂ ಚಾಲಕ ಸತೀಶ್ ಗಾಯಗೊಂಡವರು. ಅವರಿಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಗ್ರಾಮಾಂತರ ಎಸ್.ಐ ಸಂಜೀವ್ ಹಾಗೂ ಸತೀಶ್ ಇಂದು ಬೆಳಗ್ಗೆ 4.30ರ ಸುಮಾರಿಗೆ ಬಿ.ಸಿ.ರೋಡ್ ನಿಂದ ಪಾಣೆಮಂಗಳೂರು ಕಡೆಗೆ ತೆರಳುತ್ತಿದ್ದಾಗ ಬಿ.ಸಿ.ರೋಡ್ ನ ಸರ್ಕಲ್ ಬಳಿಯ ಮಸೀದಿಯ ಎದುರು ಬಿಡಾಡಿ ದನವೊಂದು ಏಕಾಏಕಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಸುಮಾರು 40 ಅಡಿ ಆಳಕ್ಕೆ ಜೀಪ್ ಉರುಳಿ ಬಿದ್ದಿದೆ. ಪರಿಣಾಮ ಜೀಪ್ ನಲ್ಲಿದ್ದ ಎಸ್.ಐ ಹಾಗೂ ಚಾಲಕ ಇಬ್ಬರಿಗೂ ಗಾಯಗೊಂಡಿದ್ದಾರೆ.
ವಾಹನ ಕೆಳಗೆ ಬೀಳುತ್ತಿರುವುದನ್ನು ನೋಡಿದ ಅದೇ ಮಾರ್ಗದಲ್ಲಿ ಬರುತ್ತಿದ್ದ ವಾಹನವೊಂದರಲ್ಲಿದ್ದ ಯುವಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಡಾಡಿ ದನ ಅಡ್ಡ ಬಂದ ಪರಿಣಾಮ 40 ಅಡಿ ಆಳಕ್ಕೆ ಬಿದ್ದ ಪೊಲೀಸ್ ವಾಹನ: ಎಸ್.ಐ, ಚಾಲಕನಿಗೆ ಗಾಯ
Prasthutha|