ಬಂಧಿತ ಪತ್ರಕರ್ತ ಸಿದ್ದೀಕ್ ಕಾಪ್ಪನ್ ರ ವೈದ್ಯಕೀಯ ದಾಖಲೆಗಳನ್ನು ಹಾಜರುಪಡಿಸಿ : ಸುಪ್ರೀಂ ಕೋರ್ಟ್

Prasthutha|

ಉತ್ತರ ಪ್ರದೇಶದ ಹಥ್ರಾಸ್ ನಡೆದಿದ್ದ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲೆಂದು ತೆರಳಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರ ವೈದ್ಯಕೀಯ ದಾಖಲೆಗಳನ್ನು ಹಾಜರುಪಡಿಸುವಂತೆ ಸುಪ್ರೀಮ್ ಕೋರ್ಟ್ ಇಂದು ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರಕ್ಕೆ ಸೂಚಿಸಿದೆ. ಸುಪ್ರೀಮ್ ಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರಕ್ಕೇರಿರುವ ಎನ್ ವಿ ರಮಣ ಅವರಿರುವ ಪೀಠ ಈಗ ವಿಚಾರಣೆ ನಡೆಸುತ್ತಿದೆ. ಸಿದ್ದೀಕ್ ಅವರಿಗೆ ತನ್ನ ಪತ್ನಿಯೊಂದಿಗೆ ವೀಡೀಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಲು ಕೂಡಾ ಪೀಠ ಅನುಮತಿ ನೀಡಿದೆ.

- Advertisement -

ಜೈಲಿನಲ್ಲಿರುವ ಸಿದ್ದೀಕ್ ಕಾಪ್ಪನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಯ ಸಮಯದಲ್ಲೂ ಅವರನ್ನು ಮಥುರಾ ಆಸ್ಪತ್ರೆಯಲ್ಲಿ ಮಂಚಕ್ಕೆ ಸಂಕೋಲೆಯಲ್ಲಿ ಬಂಧಿಸಿಡಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದೇಶದಾದ್ಯಂತ ತೀವ್ರ ಅಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಪತ್ನಿ ರೈಹಾನ ಅವರು ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದಿದ್ದರು. ಅದರ ವಿಚಾರಣೆ ಇಂದು ನಡೆಯಿತು. ಈ ಕುರಿತಾಗಿನ ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.


ಇಂದಿನ ವಿಚಾರಣೆಯ ವೇಳೆ ಸರಕಾರದ ವಿರುದ್ಧ ಆರೋಪಗಳನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಿರಾಕರಿಸಿದರು. ಇತರ ಆರೋಪಿಗಳಂತೆ ವಿಚಾರಣಾ ನ್ಯಾಯಾಲಯದಲ್ಲಿ ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸಲಿ ಎಂದು ವಾದಿಸಿದರು. ಆದರೆ ಇದಕ್ಕೆ ಕಾಪ್ಪನ್ ಅವರ ವಕೀಲ ವಿಲ್ಸ್ ಮಾಥ್ಯೂ, ಸಿದ್ದೀಕ್ ಅವರ ಆರೋಗ್ಯ ಸ್ಥಿತಿ ತುಂಬಾ ಹದೆಗೆಟ್ಟಿದೆ. ಅವರು ಇತ್ತಿಚೆಗೆ ಜೈಲಿನ ಶೌಚಾಲಯದಲ್ಲಿ ಕುಸಿದು ಬಿದ್ದಿದ್ದಾರೆ. ಅವರನ್ನು ಮಂಚಕ್ಕೆ ಕಟ್ಟಿ ಹಾಕಿರುವ ಅಮಾನವೀಯ ಸ್ಥಿತಿಯನ್ನು ಮುಂದುವರೆಸದಂತೆ ಉತ್ತರ ಪ್ರದೇಶ ಸರಕಾರಕ್ಕೆ ಕೋರಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಉತ್ತರಿಸಿದರು. ಸುಪ್ರೀಮ್ ಕೋರ್ಟ್ ಕಾಪ್ಪನ್ ಅವರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುವಂತೆ ಕೋರಿದರು. ಇಂದು ಸಂಜೆಯೊಳಗಾಗಿ ಸುಪ್ರೀಮ್ ಕೋರ್ಟ್ ಹಾಗೂ ವಕೀಲ ವಿಲ್ಸ್ ಮಾಥ್ಯೂ ಅವರಿಗೆ ವೈದ್ಯಕೀಯ ದಾಖಲೆಗಳನ್ನು ಒದಗಿಸುವಂತೆ ಸುಪ್ರೀಮ್ ಕೋರ್ಟ್ ಸೂಚಿಸಿದೆ.

Join Whatsapp