ಬೆಂಗಳೂರು: ರಾಹುಲ್ ಗಾಂಧಿಯ ನೇತೃತ್ವದಲ್ಲಿ ಕಾಂಗ್ರೆಸ್ ವತಿಯಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ “ಭಾರತ ಜೋಡೋ ಯಾತ್ರೆ” ಕಾರ್ಯಕ್ರಮದಲ್ಲಿ ಪೇಸಿಎಮ್ ಟಿ ಶರ್ಟ್ ಧರಿಸಿದ ಕಾಂಗ್ರೆಸ್ ಕಾರ್ಯಕರ್ತನೊಬ್ಬನಿಗೆ ಥಳಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕೆಪಿಸಿಸಿ ಕಾನೂನು ವಿಭಾಗದ ವತಿಯಿಂದ ದೂರು ಸಲ್ಲಿಸಲಾಗಿದೆ.
ದೇಶದ ಸಂವಿಧಾನದ ಆಶಯ ಎತ್ತಿ ಹಿಡಿಯುವ, ಕಾನೂನುಗಳನ್ನು ಗೌರವಿಸುವ, ಮನುಷ್ಯರ ಘನತೆ, ಗೌರವ ಕಾಪಾಡುವ ಘನವಾದ ಉದ್ದೇಶವನ್ನು ಹೊಂದಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ಸಮಾಜ ವಿದ್ರೋಹಕ ಕೆಲಸಕ್ಕೆ ಪೊಲೀಸರು ಕೈ ಹಾಕಿದ್ದಾರೆ. ಯುವಕನ ಮೇಲೆ ಅಮಾನುಷವಾಗಿ ದೌರ್ಜನ್ಯ ಎಸಗಿ, ಹಲ್ಲೆ ಮಾಡಿದ ಪೊಲೀಸರ ಹಾಗೂ ಪೊಲೀಸ್ ಅಧಿಕಾರಿಗಳ ನಡೆಯು ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರೋದನ್ನು ಎತ್ತಿ ತೋರಿಸುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವಕನ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಮತ್ತು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಮತ್ತು ಕಾರ್ಯದರ್ಶಿ ಭೀಮನಗೌಡ ಪರಾಗೊಂಡ ದೂರು ನೀಡಿದವರಾಗಿದ್ದಾರೆ.