ಪುದುಚೇರಿ, ದೆಹಲಿಯಂತೆ ಕರ್ನಾಟಕ ಕೇಂದ್ರಾಡಳಿತ ಪ್ರದೇಶವಲ್ಲ | ರಾಜ್ಯಪಾಲರ ಸರ್ವ ಪಕ್ಷ ಸಭೆ ಕುರಿತು ಡಿಕೆಶಿ ಹೇಳಿಕೆ

Prasthutha|

‘ರಾಜ್ಯಪಾಲರ ಆಹ್ವಾನದ ಮೇರೆಗೆ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲಿದ್ದೇವೆ. ರಾಜ್ಯಪಾಲರು ಸರ್ಕಾರದಿಂದ ನೇರವಾಗಿ ಮಾಹಿತಿ ಪಡೆಯಬಹುದಿತ್ತು. ಆದರೆ ಮೊದಲ ಬಾರಿಗೆ ರಾಜ್ಯಪಾಲರು ವಿರೋಧ ಪಕ್ಷ ಹಾಗೂ ಸ್ಪೀಕರ್ ಅವರನ್ನು ಸೇರಿಸಿ ಸಭೆ ಕರೆದಿದ್ದಾರೆ. ನಮ್ಮ ರಾಜ್ಯ ಪುದುಚೇರಿ, ದೆಹಲಿಯಂತೆ ಕೇಂದ್ರಾಡಳಿತ ಪ್ರದೇಶವಲ್ಲ. ನಮ್ಮ ಸಂವಿಧಾನದ ಹಕ್ಕಿನಲ್ಲಿ, ಯಾವ ಕಾನೂನಿನ ಅನ್ವಯ ನಮ್ಮ ಜತೆ ಚರ್ಚೆ ಮಾಡುತ್ತಿದ್ದಾರೋ ಗೊತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರಕಾರದ ಕಾಲೆಳೆದಿದ್ದಾರೆ.

- Advertisement -

ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದು, ಅವರ ಆರೋಗ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಸರ್ಕಾರ ಇರುವಾಗ ರಾಜ್ಯಪಾಲರು ಈ ರೀತಿ ಹಸ್ತಕ್ಷೇಪ ಮಾಡಲು ಯಾವ ಕಾನೂನು ಬಳಸಿದ್ದಾರೆ ಎಂಬುದು ಗೊತ್ತಿಲ್ಲ. ಕಾನೂನು ಸಚಿವರು ನಮಗೆ ಈ ಬಗ್ಗೆ ಬೆಳಕು ಚೆಲ್ಲಿದರೆ ತಿಳಿದುಕೊಳ್ಳುತ್ತೇವೆ. ನಾವು ಸಭೆಯಲ್ಲಿ ಭಾಗವಹಿಸಿ ನಮ್ಮ ಸಲಹೆ ನೀಡುತ್ತೇವೆ. ನಾವು ಸರ್ಕಾರಕ್ಕೆ ಎಲ್ಲ ಸಹಕಾರ ಕೊಟ್ಟಿದ್ದೇವೆ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಎಷ್ಟು ಐಸಿಯು ಹಾಸಿಗೆ ಇವೆ? ಯಾವ ಆಸ್ಪತ್ರೆಯಲ್ಲಿ ಏನೇನಿದೆ, ಏನೇನಿಲ್ಲ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ಮಾಡೋಣ. ಈ ಪರಿಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬಬೇಕು ಮಾಧ್ಯಮಗಳು ಹೆದರಿಸುತ್ತಿವೆ ಅಂತಾ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಸಚಿವರಾಗಿ ನೀವು ಜನರಿಗೆ ಯಾವ ರೀತಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೀರಿ? ಕೇವಲ ಆರೋಗ್ಯ ಹಾಗೂ ಕಂದಾಯ ಸಚಿವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರೆ ಆಗೋದಿಲ್ಲ. ಸರ್ಕಾರದಲ್ಲಿರುವ ಎಲ್ಲ ಮಂತ್ರಿಗಳು, ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

- Advertisement -

ಸರ್ಕಾರ ಎಂದರೆ ಪಂಚಾಯಿತಿಯಿಂದ ಸಂಸತ್ ವರೆಗೂ ಎಲ್ಲವೂ ಸರ್ಕಾರದ ಭಾಗವೇ. ಮುಖ್ಯಮಂತ್ರಿ ಪರಿಹಾರ ನಿಧಿ, ಪಿಎಂ ಕೇರ್ ಗೆ ಎಷ್ಟು ಹಣ ಬಂತು, ಎಷ್ಟು ಖರ್ಚಾಯ್ತು ಅಂತಾ ಲೆಕ್ಕ ಹೇಳಿ. ಸರ್ಕಾರ ಕೋವಿಡ್ ವಾರಿಯರ್ಸ್ ಗಳಿಗೆ ವಿಮೆ ರದ್ದುಗೊಳಿಸಿದೆ. ನಾವು ಪ್ರಶ್ನಿಸಿದ ಮೇಲೆ ಬೇರೆ ಮಾದರಿಯಲ್ಲಿ ನೀಡಲಾಗುವುದು ಎಂದು ಹೇಳಿದೆ. ಲಸಿಕೆಯನ್ನು ಮೊದಲು ಪ್ರಧಾನಿ, ಮುಖ್ಯಮಂತ್ರಿಗಳು ತೆಗೆದುಕೊಳ್ಳದೇ, ಆ ಕೊರೊನಾ ವಾರಿಯರ್ಸ್ ಮೇಲೆ ಪ್ರಯೋಗಿಸಿದ್ದೀರಿ. ಇದು ಅತ್ಯಂತ ವಿಫಲ ಸರ್ಕಾರ. ಈ ಪರಿಸ್ಥಿತಿ ನಿಭಾಯಿಸಲು ನಿಮ್ಮ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಅವರು ಕಿಡಿಕಾರಿದ್ದಾರೆ.

Join Whatsapp