ಪಂಜರದ ಹಕ್ಕಿಯ ಸ್ವಾತಂತ್ರ್ಯದ ಹಾ(ಪಾ)ಡು!

Prasthutha|

-ಎನ್. ರವಿಕುಮಾರ್

- Advertisement -

ಮತ್ತದೆ ಆಗಸ್ಟ್ 15. ‘ಸ್ವಾತಂತ್ರ್ಯೋತ್ಸವ’ ಸಂಭ್ರಮ(?)ವನ್ನು ಕಂಡಾಗಲೆಲ್ಲಾ ಈ ದೇಶದ ಜನರನ್ನು ಆಳುವವರು, ಆಳಲು ಹೊರಟವರು ಅದೆಷ್ಟು ನಾಜೂಕಾಗಿ ಭ್ರಮೆಯ ಲೋಕಕ್ಕೆ ನೂಕುತ್ತಲೆ ಬರುತ್ತಿದ್ದಾರೆ ಎಂಬ ದಿಗ್ಭ್ರಮೆ  ಮುತ್ತಿಕೊಳ್ಳುತ್ತಲೇ ಇದೆ.  ಈ ಆತಂಕಗಳು ಮುಗಿಯವ ಹಾಗೆ ಕಾಣುತ್ತಿಲ್ಲ. ಎಲ್ಲಾ ಕಾಲಕ್ಕೂ ದಿಟವೆನಿಸುವಂತೆ  ಸಿದ್ದಲಿಂಗಯ್ಯ ಅವರ ಈ ಕವಿತೆಯೂ ಬಿಡದೆ ಕಾಡುತ್ತದೆ.

 ಯಾರಿಗೆ ಬಂತು ಎಲ್ಲಿಗೆ ಬಂತು

- Advertisement -

 ನಲವತ್ತೇಳರ ಸ್ವಾತಂತ್ರ್ಯ

 ………………….?

 ………………..

 ಬಡವರ ಮನೆಗೆ ಬರಲಿಲ್ಲ

 ಬೆಳಕಿನ ಕಿರಣ ತರಲಿಲ್ಲ.

 ಗೋಳಿನ ಕಡಲನು ಬತ್ತಿಸಲಿಲ್ಲ

 ಸಮತೆಯ ಹೂವನು ಅರಳಿಸಲಿಲ್ಲ

 ನಲವತ್ತೇಳರ ಸ್ವಾತಂತ್ರ್ಯ…

 ಇನ್ನೆಷ್ಟು ದಿನ ಇದೇ ಕವಿತೆಯನ್ನು ಗುನುಗುನಿಸಿಕೊಂಡು ಇರಬೇಕಾದೀತು? ಸ್ವಾತಂತ್ರಪೂರ್ವ ಭಾರತದ ಆಶೋತ್ತರಗಳು ಏನಾಗಿದ್ದವು? ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅವೆಲ್ಲವೂ ಸಾಕಾರಗೊಂಡಿವೆಯೇ? ಎಂದು ಅವಲೋಕಿಸುವಾಗ ಭ್ರಮನಿರಶನವೇ ಆವರಿಸಿಕೊಳ್ಳುತ್ತದೆ. ಸ್ವತಂತ್ರ ಭಾರತದ ಆಶೋತ್ತರಗಳನ್ನು ಈಡೇರಿಸುವಲ್ಲಿ ಸೋತಿದ್ದಾರೂ ಎಲ್ಲಿ? ಹೇಗೆ? ಏಕೆ? ಎಂಬ ಅನೇಕ ಪ್ರಶ್ನೆಗಳು ನಮ್ಮ ಮುಂದಿವೆ.  ಸುಧೀರ್ಘ ಹೋರಾಟದ ಫಲವಾಗಿಯೇ ಸಿಕ್ಕ ಸ್ವಾತಂತ್ರ ಸರ್ವಾಧಿಕಾರವಾಗುವತ್ತ ಸಾಗಿರುವ ಬೆಳವಣಿಗೆಗಳಿಗೆ ಕಾರಣರಾರು? ಎಂದು ಬಗೆಯಲು ಹೊರಟರೆ ದೇಶದ್ರೋಹಿ ಆಗಿಬಿಡುವ ಅಪಾಯವನ್ನು ಎಳೆದುಕೊಂಡಂತೆ ಭಾಸವಾಗುತ್ತಿದೆ.

 ಇಂದು ಸ್ವಾತಂತ್ರದ ಪರಿಕಲ್ಪನೆಯನ್ನೆ ವಿರೂಪಗೊಳಿಸುತ್ತಿರುವ ಭಾರತದ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವದ ಮೌಲಿಕ ಸಿದ್ಧಾಂತಗಳನ್ನು ನುಚ್ಚುನೂರು ಮಾಡಿರುವುದು  ನಿಚ್ಚಳವಾಗಿದೆ. ಸ್ವಾತಂತ್ರ್ಯ ಭಾರತ ಸಮುದಾಯದ ಶ್ರಮದಿಂದ ಚಳುವಳಿಯ ರೂಪ ಪಡೆದು ಜನಿಸಿದ್ದು. ಭಾರತಕ್ಕೊಂದು ಹೊಸಚೇತನ ಬರಬೇಕಾದರೆ ಗಾಂಧಿಯ ಹೋರಾಟ ಎಷ್ಟು ಪ್ರಧಾನ ಶಕ್ಕಿಯಾಯಿತೋ ಹಾಗೆ ಅಂಬೇಡ್ಕರ್ ಸಂವಿಧಾನ ಜೀವವಾಯಿತು. ಯಾವುದೇ ಹೋರಾಟಕ್ಕಾಗಲಿ ಜನಶಕ್ತಿ ಅತಿಮುಖ್ಯ. ಭಾರತಕ್ಕೆ ಸ್ವಾತಂತ್ರ್ಯವೆಂಬ ಘನತೆ ದಕ್ಕಬೇಕಾದರೆ ಒಟ್ಟು ಸಮುದಾಯವೇ ಜಂಗಮಗೊಂಡಿತಲ್ಲ ಈ ನಡಿಗೆಯನ್ನು ಬಿಟ್ಟು ಸ್ವತಂತ್ರ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

 ಮಹಾತ್ಮಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ವತಂತ್ರ ಭಾರತದ ಪರಿಕಲ್ಪನೆ ಸೋತು ಸೊರಗಿದೆ. ಅಷ್ಟೇ ಅಲ್ಲ, ದಿನದಿಂದ ದಿನ ಪ್ರಪಾತಕ್ಕೆ ತಳ್ಳಲ್ಪಡುತ್ತಿರುವುದು ಈ ಹೊತ್ತಿನ ದೊಡ್ಡ ಗಂಡಾಂತರವೆನ್ನಬಹುದು. ಸ್ವಾತಂತ್ರ್ಯ ಹೋರಾಟ ಎಂಬುದು ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವಲ್ಲ. ಈ ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಗುಲಾಮಗಿರಿಯಿಂದ ಬಿಡುಗಡೆಗಾಗಿ ನಡೆದ ಸಮದರ್ಶಿ ಹೋರಾಟ. ಮೇಲ್ನೋಟಕ್ಕೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಹಿಡಿತದಿಂದ ಪಾರಾಗುವ ಹೋರಾಟವಾಗಿದ್ದರೆ ಆಂತರಿಕವಾಗಿ ಸಾಮಾಜಿಕ-ಆರ್ಥಿಕ ಸ್ವಾತಂತ್ರದ ಹಂಬಲವೂ ಇದರಲ್ಲಿ ಅಡಕವಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಇದನ್ನೆ ಅಂಬೇಡ್ಕರ್ ಅವರು ದೇಶದ ಬಾಹ್ಯ ಸ್ವಾತಂತ್ರ್ಯಕ್ಕಿಂತ  ದೇಶದ ಆಂತರಿಕ ಸ್ವಾತಂತ್ರ್ಯ ಬಹುಮುಖ್ಯವಾಗುತ್ತದೆ ಎಂದು ಪ್ರತಿಪಾದಿಸಿದ್ದರು. ಅಷ್ಟೇ ಅಲ್ಲ,  ಭಾರತದ  ಬಹುತೇಕ ಮುಂಚೂಣಿ ಹೋರಾಟಗಾರರು ಬ್ರಿಟೀಷರ ಮುಂದೆ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಿದ್ದಾಗ, ಭಾರತಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲದೆ ಬಹುಮುಖ್ಯವಾದ ಸಾಮಾಜಿಕ  ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಕೊಡಬೇಕೆಂಬುದನ್ನು ಕರಾರುವಕ್ಕಾಗಿ ಪ್ರತಿಪಾದಿಸಿದವರು ಅಂಬೇಡ್ಕರ್. ಅದು ಸ್ವಾತಂತ್ರ್ಯದ ಸ್ವರೂಪದ ದಿಕ್ಸೂಚಿಯೂ ಆಗಿತ್ತು. ಇದು ಬ್ರಿಟಿಷರನ್ನು ನಿಬ್ಬೆರಗಾಗುವಂತೆ ಮಾಡಿತ್ತು. ಅಂತಹ ದೂರದೃಷ್ಟಿಯಿಂದ ಗಳಿಸಿದ ಸ್ವಾತಂತ್ರ್ಯ ಇಂದು ನಮ್ಮವರಿಂದಲೇ ಹರಣವಾಗುತ್ತಿರುವುದು ವಿಪರ್ಯಾಸ.

 ಧರ್ಮವಾಗಲಿ, ಮೂಲಭೂತವಾದ ವಾಗಲಿ ಎಂದಿಗೂ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿರಲಿಲ್ಲ. ಸ್ವತಂತ್ರ ಭಾರತ ಅಸ್ತಿತ್ವಕ್ಕೆ ಬರುವ ಹೊತ್ತಿಗೆ ಅಧಿಕಾರ ರಾಜಕಾರಣ ಎಂಬುದು ಧರ್ಮವನ್ನು ಮುಂದಿರಿಸಿಕೊಂಡು ಸಾಧಿಸಿತು. ಅದರ ಪರಿಣಾಮವೇ ಪಾಕಿಸ್ತಾನ ಜನ್ಮ ತಳೆಯಿತು. ಭಾರತ ಮಾತ್ರ ಧರ್ಮ ನಿರಪೇಕ್ಷತೆ, ಸಮಾಜವಾದಿ ನೆಲೆಯಲ್ಲೇ ಮುನ್ನಡೆಯಿತಾದರೂ, ಇದನ್ನು ಸಹಿಸದ ಶಕ್ತಿಗಳು ನೈಜ ಹಿಂದೂವಾದಿಯಾದ ಗಾಂಧಿಯನ್ನು ಬಲಿ ತೆಗೆದುಕೊಂಡವು. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಸ್ವಾತಂತ್ರ್ಯ ಹೋರಾಟಕ್ಕೆ ಹೆಗೆಲಿಗೆ ಹೆಗಲು ಕೊಟ್ಟು ಜೀವ-ಜೀವನ ಬಲಿದಾನಗೈದರೂ ಅವರನ್ನು ಸ್ವಾತಂತ್ರ್ಯದ ಫಲವುಣ್ಣುವ ಭಾಗಿದಾರರನ್ನಾಗಿ ಮಾಡಲಿಲ್ಲ. ಇಲ್ಲಿಂದಲೆ ಸ್ವಾತಂತ್ರ್ಯದ ಹರಣದ ಆರಂಭವಾಯಿತು. ಅದು ಮುಂದುವರೆದು ಇಂದಿಗೆ ದೇಶವನ್ನು ಧರ್ಮಾಧಾರಿತ ನೆಲೆಯಲ್ಲಿ ಕಟ್ಟುವ, ಸಾರ್ವಭೌಮತೆ, ಸಮಾಜವಾದಿ, ಜಾತ್ಯಾತೀತ ತಾತ್ವಿಕ ನೆಲಗಟ್ಟುಗಳನ್ನೆ ಪಲ್ಲಟಗೊಳಿಸುವ, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳನ್ನು ಹೊರಗಿಟ್ಟ ಭಾವೋದ್ರೇಕ ರಾಜಕಾರಣವೊಂದು ನೆಲೆಯೂರತೊಡಗಿರುವುದು ದೌಭಾರ್ಗ್ಯ ಮತ್ತು ಆತಂಕದ ಸಂಗತಿ. ಅದೆಷ್ಟರ ಮಟ್ಟಿಗೆ ಎಂದರೆ ಧರ್ಮೋನ್ಮಾದದ ರಾಜಕಾರಣವೊಂದು ಮಾನವೀಯ ಮೌಲ್ಯಗಳ ಆತ್ಮವನ್ನೇ ಧರಿಸಿರುವ ಸಂವಿಧಾನವನ್ನೆ ಬದಲಾಯಿಸುವ ಆ ಮೂಲಕ ಭಾರತದ ಬಹುತ್ವದ ನಾಶ ಮತ್ತು ಜೀವ ವಿರೋಧಿ ಜಡಸಿದ್ದಾಂತದ ಪ್ರತಿಪಾದನೆ- ಪ್ರತಿಷ್ಠಾಪನೆಯ ಪ್ರಯತ್ನಗಳೇ ಆಗಿವೆ.  

 ದೇಶವೆಂಬ ಪ್ರಜ್ಞೆಯೊಂದು ವಿಶಾಲವಾಗಲು ಸಂವಿಧಾನವೆಂಬ ಅನುಭೂತಿ ಬೇಕಾಯ್ತು. ಗಾಂಧಿಯೆಂಬ ಮಹಾಚೇತನ ಹುಟ್ಟು ಹಾಕಿದ ಹಿಂಸೆಯಾಚೆಗಿನ ಸ್ಥಿತಿಯಂತೆ ಸಾಮಾಜಿಕ ಹಕ್ಕಿನ ಮಹಾಪ್ರಭೆ ಅಂಬೇಡ್ಕರ್ ಕೊಟ್ಟ ಸಂವಿಧಾನ ಸ್ವತಂತ್ರ ಭಾರತಕ್ಕೊಂದು ಗೌರವದ ಅಸ್ತಿತ್ವವನ್ನು ಕೊಟ್ಟು ದೇಶದ ಒಟ್ಟು ಸ್ಥಿತಿಗೆ ಸರಿಯಾದ ಆವರಣವನ್ನು ಒದಗಿಸಿತು. ಸ್ವಾತಂತ್ರ್ಯ ನಂತರದಲ್ಲಿ ವ್ಯವಸ್ಥೆ ನಿಧಾನಕ್ಕೆ ಮಾರ್ಪಾಡಾಗುತ್ತ ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಮುಂದಾಯಿತು. ಇಂಥದ್ದೊಂದು ಅರ್ಹತೆ ದೇಶಕ್ಕೆ ಬರಬೇಕಾದರೆ ದೇಶಾದ್ಯಂತ ಅನೇಕ ಸಿದ್ಧತೆಗಳಾದವು. ಎಲ್ಲ ಜನವರ್ಗಕ್ಕೂ ಸರಿಯಾದ ಬದುಕನ್ನು ಕಟ್ಟಿಕೊಟ್ಟದ್ದು ಸಂವಿಧಾನ. ಕ್ರಮೇಣ ಅರಾಜಕತೆಯ ಛಾಪು ನಿಧಾನಕ್ಕೆ ದೇಶಕ್ಕೆ ಮುತ್ತಲು ಆರಂಭಿಸಿದ ಮೇಲೆ ಸ್ವತಂತ್ರ ಭಾರತದ ಎಲುಬುಗಳನ್ನು ನಿಧಾನಕ್ಕೆ ಮುರಿಯಲು ಮುಂದಾದ ಧರ್ಮಾಂಧರು ಸಹಜವಾಗಿ ವಿಕಾಸವಾಗುತ್ತಿದೆ ದೇಶ ಎನ್ನುವಂತೆ ಬಿಂಬಿಸುತ್ತಲೇ ಲಾಭಿಗಾಗಿ ಹಾತೊರೆಯುವ ಉದ್ಯಮ ಭಾರತವನ್ನು, ಅಮಾನವೀಯ ಭಾರತವನ್ನು  ಕಟ್ಟತೊಡಗಿದ್ದಾರೆ. ಇಲ್ಲಿ ಶ್ರಮಿಕ ವರ್ಗಕ್ಕೆ ಕೆಟ್ಟದಾದ ಪೆಟ್ಟುಗಳು ಬೀಳಲಾರಂಬಿಸಿದವು. ಸರ್ವ ಜಾತಿ ಧರ್ಮಗಳು ಒಂದಾಗಿ ದುಡಿದು ಪ್ರಭೆ ತಂದುಕೊಂಡ ಭಾರತದ ಉನ್ನತ ಚಲನೆಗಳಾದ ಗಾಂಧಿ,  ಅಂಬೇಡ್ಕರ್ ಮೊದಲಾದ ಶುದ್ಧ ಚಿಂತಕರ ದಾರಿಗೆ ಮುಳ್ಳು ಬಿದ್ದವು. ಪ್ರತೀ ಹಂತದ ಪ್ರಗತಿಗಳಲ್ಲೂ ಧರ್ಮಯುದ್ಧವೇ ದೇಶಲಕ್ಷಣವನ್ನು ಕುರೂಪಗೊಳಿಸುವಂತೆ ಸಿದ್ಧ ಮಾಡುವ ಭಂಡಭಕ್ತರ ಗುಂಪು ದೊಡ್ಡದಾಯಿತು. ಕ್ರಮೇಣ ವಿಪರೀತಗಳು ಘಟಿಸಲಾರಂಬಿಸಿದವು. ಸಂವಿಧಾನದ ಸ್ಪಷ್ಟ ಮಾದರಿಗಳನ್ನು ನಾಶಮಾಡುವ ಜಾತ್ಯಂಧರ ಹಿಂಡು ಹಿಗ್ಗಲಾರಂಭಿಸಿ ಹಲ್ಲೆಗಳು ಸಹಜ ಕ್ರಿಯೆಗಳೆಂಬಂತೆ ಸಲೀಸಾಗಿ ಜರುಗುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲೂ ಅದ್ವಾನಗಳನ್ನೇ ದೇಶದ ಉಳಿವಿಗೆ ಪ್ರೇರಣೆಗಳೆಂಬಂತೆ ನಂಬಿಸಲಾಗುತ್ತಿರುವ ಈ ಹೊತ್ತಿನಲ್ಲಿ  ಜನರ ಆಯ್ಕೆಗಳಿಗೆ ದೇಶಾಭಿಮಾನವೆಂಬ ಪೊಳ್ಳು ಮದವನ್ನ ತುಂಬುವ ಮೂಲಕ ಪುರಾಣಗಳನ್ನು ಮುನ್ನೆಲೆಗೆ ತಂದು ಅಂಬೇಡ್ಕರ್, ಗಾಂಧಿಯಂತ ದೇಶಕಟ್ಟಿದ ಮಹಾ ಮನಸುಗಳನ್ನು ಮೂಲೆಗೆ ತಳ್ಳಿ ಅಸ್ತ್ರ-ಶಸ್ತ್ರ ಭಾರತವನ್ನು ನಿರ್ಮಿಸಿ ಕೊಲೆ-ಸುಲಿಗೆ ಜಾತಿಧರ್ಮದ ಹೆಸರಿನಡಿ ನೆತ್ತರು ಬಳಿಯಲಾಗುತ್ತಿದೆ.

 ಸದ್ಯದ ಪರಿಸ್ಥಿತಿಯಲ್ಲಿ ಭಾರತ ಅನುಭವಿಸುತ್ತಿರುವುದು ರಾಜಕೀಯ ಸ್ವಾತಂತ್ರ್ಯವೇ ವಿನಃ, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವನ್ನಲ್ಲ. ಜಾತ್ಯಾತೀತ, ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯಕ್ಕಾಗಿ, ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಮತ್ತು ಉಪಾಸನೆಯಂತಹ ಮೌಲಿಕ ಆಶಯಗಳ ಸ್ವಾತಂತ್ರದ ಆಶೋತ್ತರಗಳನ್ನು ಈಡೇರಿಸುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ. ಇವುಗಳನ್ನು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ (ಸಂವಿಧಾನದ ಪರಿಚ್ಛೇದ 19(1) ವನ್ನು ನಿರ್ದಾಕ್ಷಿಣ್ಯವಾಗಿ ದಮನ ಮಾಡುವ ಕೆಲಸ ಆರಂಭದಿಂದಲೂ ನಡೆಯುತ್ತಾ ಬಂದಿದೆಯಾದರೂ ಕಳೆದ ಏಳು ವರ್ಷಗಳಲ್ಲಿ ಇದು ಅತ್ಯಂತ ಕ್ರೌರ್ಯದ ಕಡೆಗೆ ಹೆಜ್ಜೆ ಹಾಕಿದೆ.

 ಸ್ವಾತಂತ್ರ್ಯೋತ್ಸವದ ಆಚರಣೆಗಳು  ಕ್ಲೀಷೆಯಿಂದ ಕೂಡಿದ ಒಂದು ಕಾರ್ಯಕ್ರಮವಷ್ಟೆ. ವಾಸ್ತವವಾಗಿ ಇಂದು ದೇಶದ ಜನತೆ ಸ್ವಾತಂತ್ರ್ಯವನ್ನು ಮರು ವ್ಯಾಖ್ಯಾನಕ್ಕೊಳಪಡಿಸುವ ಕಾಲ ಸನ್ನಿಹಿತವಾಗಿದೆ.  ಚುನಾವಣಾ ರಾಜಕಾರಣದಲ್ಲಿ ಮತ ಚಲಾಯಿಸುವುದಷ್ಟೆ  ಜನತೆಗೆ ದಕ್ಕಿರುವ ಸ್ವಾತಂತ್ರ್ಯವಾಗಿದ್ದರೆ ಅದರ ಹೊರತಾದ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯಗಳು ದಕ್ಕಿವೆಯಾ ಎಂಬುದನ್ನು ನೋಡುವಾಗ ದೇಶ ಸರ್ವಾಧಿಕಾರದ ತೆಕ್ಕೆಗೆ ಜಾರಿ ಹೋಗುತ್ತಿರುವ ಎಲ್ಲಾ ಸಂದರ್ಭಗಳು ನಮ್ಮ ಕಣ್ಣ ಮುಂದೆ ಕಾಣಸಿಗುತ್ತವೆ.  2016  ನವಂಬರ್ 8 ನೋಟು ಅಮಾನ್ಯೀಕರಣದಂತ ನಿರ್ಧಾರ ಭಾರತ ಕಂಡ ಆರ್ಥಿಕ ಸ್ವಾತಂತ್ರದ ಹರಣವಾಗಿ ದಾಖಲಾಯಿತು. ದಿನಬೆಳಗಾಗುವುದರೊಳಗೆ ಈ ದೇಶದ ಸಾಮಾನ್ಯ ಜನ ಬ್ಯಾಂಕ್‌ಗಳ ಮುಂದೆ ಕ್ಯೂ ನಿಂತು ಕುಸಿದು ಸಾಯುವಂತಾಯಿತು. ಆರ್ಥಿಕ ಸ್ವಾತಂತ್ರ್ಯದ ಪರಿಕಲ್ಪನೆಯೇ ಇಲ್ಲದ ಅಧಿಕಾರಸ್ಥರು ಎಸಗಿದ ಮಹಾ ಕ್ರೌರ್ಯ ಇದು. ಸಿಎಎ, ಎನ್.ಆರ್.ಸಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಈ ನೆಲದ ಮೂಲ ನಿವಾಸಿಗಳನ್ನು ಕ್ಷಣಮಾತ್ರದಲ್ಲಿ ಪರಕೀಯರನ್ನಾಗಿಸುವ ಸಾಮಾಜಿಕ ಸ್ವಾತಂತ್ರ್ಯದ ಹತ್ಯೆಯೇ ನಡೆದು ಹೋಗಿದೆ. ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ತನ್ನ ನೆಲದಲ್ಲೇ ಭಯ ಮತ್ತು ಅಭದ್ರತೆಯಿಂದ ಬದುಕುವಂತಹ ರಾಜಕೀಯ ಮತ್ತು ಸಾಮಾಜಿಕ ವಾತಾವರಣವನ್ನು ಹುಟ್ಟು ಹಾಕಿರುವಾಗ ಸ್ವಾತಂತ್ರ್ಯ ಸಂಭ್ರಮಕ್ಕೆ ಅರ್ಥವಾದರೂ ಏನಿದೆ? ಎಂಬ ಪ್ರಶ್ನೆಗಳನ್ನು ಪ್ರಜ್ಞಾವಂತ ಜನರು ತಮ್ಮಗೆ ತಾವೇ ಕೇಳಿಕೊಳ್ಳಬೇಕಾಗಿದೆ.

 ಕೊರೋನ ಲಾಕ್‌ಡೌನ್ ಹೆಸರಿನಲ್ಲಿ ಈ ದೇಶದ ಶೇ.13ರಷ್ಟು ಜನರನ್ನು ದಿನ ಬೆಳಗಾಗುವುದರೊಳಗೆ ಅಮಾನವೀಯವಾಗಿ ಬೀದಿಗೆ ತಳ್ಳಲಾಯಿತು. ವಲಸೆ ಹೊರಟ ಈ ನಿರ್ಗತಿಕ ಜನಸಮುದಾಯವನ್ನು ಕಂಡಾಗ ‘ಸಬ್ ಕಾ ಸಾಥ್- ಸಬ್‌ಕಾ ವಿಕಾಸ್’ ಎಂಬ  ಆತ್ಮರತಿಯ ಕೊಂಡಾಟದಲ್ಲಿ ಮುಳುಗಿರುವ ಹಿಂದೂಸ್ಥಾನದೊಳಗಿನ  ವಿಘಟಿತ, ಅನಾಥ ಬಡ ಭಾರತವೊಂದು ಹಸಿವು, ಕಣ್ಣೀರ ಹೊತ್ತು ಸಟ್ಟನೆ ಎದ್ದು ಹೋಗುತ್ತಿದೆಯೇನೊ ಎನ್ನುವಂತಿತ್ತು. ಈ ದೇಶವನ್ನು ಬೆವರು, ರಕ್ತ ಬಸಿದು ಕಟ್ಟುವ ಜನಸಮುದಾಯದ ಅನ್ನ, ನೀರು, ನಿದ್ದೆ, ನೆಲೆಗಳನ್ನು ಅನಾಮತ್ತಾಗಿ ಕಸಿದುಕೊಂಡ ಪ್ರಭುತ್ವ  ಆತ್ಮ ನಿರ್ಭರದ ಹೆಸರಿನಲ್ಲಿ ತುಚ್ಛವಾಗಿ ಕಂಡು ಕಣ್ಮುಚ್ಚಿಕೊಂಡು ನಡೆದಿದೆ.

 ದೇಶಭಕ್ತಿ ಮತ್ತು ಧರ್ಮದ ಅಪವ್ಯಾಖ್ಯಾನಗಳ ಮೂಲಕ ಜನರ ಸಾಮಾಜಿಕ ಸ್ವಾತಂತ್ರ್ಯವನ್ನು   ಕಸಿದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೂಲ ಧಾತುಗಳೇ ಆಗಿರುವ ಪ್ರಶ್ನಿಸುವ  ಮತ್ತು ಸಂವಾದಗಳನ್ನು  ಅಧಿಕಾರ ಬಲದಲ್ಲಿ ನಿರಾಕರಿಸಲಾಗುತ್ತಿದೆ. ಆದೇಶಗಳನ್ನು ಮಾತ್ರವೇ ಪಾಲನೆ ಮಾಡಬೇಕು ಹೊರತು ಪ್ರಶ್ನಿಸುವುದು ಇಂದು ದೇಶದ್ರೋಹವಾಗಿಯೂ, ಪ್ರಶ್ನೆ ಮಾಡುವವರು ದೇಶದ್ರೋಹಿಗಳಾಗಿಯೂ ಗುರುತಿಸಿ ಜೈಲಿಗೆ ತಳ್ಳಲ್ಪಡುತ್ತಾರೆ.  ಪಕ್ಷ ರಾಜಕಾರಣದ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ಭ್ರಷ್ಟಾಚಾರ, ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳನ್ನು ಪ್ರಶ್ನಿಸುವ,  ಅವುಗಳ ವಿರುದ್ಧ ಹೋರಾಡುವ ವಿಪಕ್ಷಗಳ  ನಾಯಕರನ್ನು ಸಾಂವಿಧಾನಿಕ ಸಂಸ್ಥೆಗಳೇ ಆದ ನ್ಯಾಯಾಲಯ, ಐಟಿ, ರಾಷ್ಟ್ರೀಯ ತನಿಖಾ ದಳಗಳಿಂದಲೆ ಹತ್ತಿಕ್ಕುವುದು,  ಮತ್ತು ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಲೇಖಕರು, ಕವಿಗಳನ್ನು, ಜನಪರ ಚಿಂತಕರನ್ನು  ನಕ್ಸಲೈಟ್ಸ್,  ಭಯೋತ್ಪಾದಕರು, ವಿದ್ವಂಸಕರು ಎಂಬ ಪಟ್ಟಿಗೆ ಸೇರಿಸಿ ಜೈಲಿಗೆ ನೂಕುತ್ತಿರುವಾಗ ಇಂತಹ ಸಂದರ್ಭದಲ್ಲಿ  ಸ್ವಾತಂತ್ರೋತ್ಸವ ಎಂಬುದು  ಅರ್ಥಹೀನ ಮತ್ತು ಒಂದು ಡಾಂಭಿಕ ಅಬ್ಬರವಷ್ಟೇ.     

 ಸ್ವತಂತ್ರ ಭಾರತದ ವಿಕಾಸದ ಹೆಸರಿನಲ್ಲಿ ಶಿಕ್ಷಣದ ದಿಕ್ಕನ್ನು ಕೆಡಿಸಿ ಧಾರ್ಮಿಕ ದಂಧೆಯನ್ನು ಸಮುದಾಯದ ಮೇಲೆ ಹೇರಲಾಗಿ ಸರಿಯಾದ ನಿಲುವುಗಳ ಕಡೆಗೆ ಜನ ಚಲಿಸಿದಂತೆ ಗೋಡೆಕಟ್ಟಲಾಗಿದೆ. ಇವತ್ತಿನ ಹಾಗೇ ಮುಂದಿನ ತಲೆಮಾರುಗಳು ಧರ್ಮದ ಬಲೆಯಿಂದ ಹೊರಬರಲಾಗದೆ ಉಸಿರು ಕಟ್ಟಿದ ಭಾರತವನ್ನು ಮೈದುಂಬಿಕೊಂಡು ನರಳುವ ವೈರುಧ್ಯಗಳ ಜಟಾಪಟಿಗೆ ಎದುರಾಗಲೇಬೇಕಾದ ಅನಿವಾರ್ಯವಿದೆ. ಮಾಧ್ಯಮಗಳ ಸ್ಥಿತಿಯಂತೂ ಹದಗೆಟ್ಟು ರಾಜಕಾರಣದ ಪಾಚಿಯಲ್ಲಿ ಜಾರಿ ಧರ್ಮದ ಉಸುಕಿನಲ್ಲಿ ನಿಂತುಬಿಟ್ಟಿವೆ.  ಸಂವಿಧಾನವನ್ನು ಮುಕ್ಕು ಮಾಡುತ್ತಿರುವ ಭಾರತದ ಅವಸ್ಥೆ ಘೋರವಾಗುತ್ತಿರುವ ಕುರಿತಾಗಿ ಆಂದೋಲನಕ್ಕೆ ಇಳಿದ ಪ್ರಜ್ಞಾವಂತರನ್ನು ಸಲೀಸಾಗಿ ಹತ್ಯೆಗೈಯ್ಯುತ್ತಿರುವ ರಾಜಕಾರಣಕ್ಕೆ ನಿಯಂತ್ರಣ ಬೀಳದೇ ಹೋದರೆ ಭಾರತದ ತುಂಬಾ ಮಂದಿರಗಳೆದ್ದು ಸಮಾನತೆಯ ಬಹುತ್ವಭಾರತ ಅವಸಾನದ ಅಶಕ್ತಸ್ಥಿತಿಯಲ್ಲಿ ಮುಳುಗುವುದಂತೂ ಖಾತ್ರಿ. ಜಾತಿ ಧರ್ಮದ ಆಸರೆಗೆ ಬಿದ್ದ ಭಾರತಕ್ಕೆ ಉಳಿವಿಲ್ಲ. ಪ್ರಭುತ್ವದ ಹಿಡಿತಗಳು ದೇಶಭಕ್ತಿ ಎಂಬ ಜೊಳ್ಳು ಮುಖಗವಚ ಧರಿಸಿ ಜನಸಾಮಾನ್ಯರ ನೈಜ ಇಚ್ಛೆಗಳನ್ನು ಧರ್ಮಗುಡಿಯಲ್ಲಿ ಹೂಳಲಾಗುತ್ತಿದೆ. ಬಹುತ್ವ ಭಾರತದ ಕನಸು ಕಂಡ ಮಹಾತ್ಮರನ್ನೆಲ್ಲಾ ಖಳನಾಯಕರನ್ನಾಗಿಸುತ್ತಿರುವ ಆಡಳಿತವನ್ನು ಪ್ರಶ್ನಿಸುವ ಮನಸ್ಸುಗಳು ಹೆಚ್ಚದ ಹೊರತು ಸ್ವತಂತ್ರ ಭಾರತದ ಪ್ರಾಣ ಉಳಿಯಲಾರದು.



Join Whatsapp