ನ್ಯೂಝಿಲಂಡ್ ಮಸೀದಿ ಮೇಲೆ ದಾಳಿ | ಜನಾಂಗೀಯವಾದಿ ಭಯೋತ್ಪಾದಕನಿಗೆ ಪರೋಲ್ ಇಲ್ಲದ ಜೀವಾವಧಿ ಶಿಕ್ಷೆ | ಇತಿಹಾಸ ಬರೆದ ನ್ಯೂಜಿಲ್ಯಾಂಡ್

Prasthutha|

ವೆಲ್ಲಿಂಗ್ಟನ್ : ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳಲ್ಲಿ ಪ್ರಾರ್ಥನೆಯಲ್ಲಿದ್ದವರ ಮೇಲೆ ದಾಳಿ ನಡೆಸಿ 51 ಮುಸ್ಲಿಮರ ಸಾವಿಗೆ ಕಾರಣವಾಗಿದ್ದ ಬಿಳಿಯ ಜನಾಂಗೀಯವಾದಿಗೆ ಅಲ್ಲಿನ ಕೋರ್ಟ್ ಪರೋಲ್ ಇಲ್ಲದ ಜೀವಾವಧಿ ಶಿಕ್ಷೆ ವಿಧಿಸಿದೆ. ಆ ಮೂಲಕ ದೇಶದಲ್ಲಿ ಇದೇ ಮೊದಲ ಬಾರಿಗೆ, ಇಲ್ಲಿನ ಅತ್ಯಂತ ಕಠಿಣ ಕಾನೂನಿನಲ್ಲಿ ಶಿಕ್ಷೆಗೆ ಗುರಿಯಾದ ಪ್ರಥಮ ವ್ಯಕ್ತಿಯಾಗಿ ಈತ ಗುರುತಿಸಲ್ಪಟ್ಟಿದ್ದಾನೆ.

- Advertisement -

ಆಸ್ಟ್ರೇಲಿಯಾ ನಿವಾಸಿ 29ರ ಹರೆಯದ ಬ್ರೆಂಟನ್ ಟ್ಯಾರೆಂಟ್ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಬ್ರೆಂಟನ್ ವಿರುದ್ಧ 51 ಮಂದಿಯ ಹತ್ಯೆಯ ಆರೋಪ ಈ ವರ್ಷದ ಆರಂಭದಲ್ಲಿ ಸಾಬೀತಾಗಿತ್ತು. 2019ರ ಮಾರ್ಚ್ ನಲ್ಲಿ ಫೇಸ್ ಬುಕ್ ಮೂಲಕ ಲೈವ್ ಮಾಡುತ್ತಾ, ಈ ಭಯೋತ್ಪಾದಕ ತನ್ನ ದುಷ್ಕೃತ್ಯ ಎಸಗಿದ್ದ.
ಬ್ರೆಂಟನ್ ತನ್ನ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ಹೊಂದಿಲ್ಲ. ಹೀಗಾಗಿ ಇಂತಹ ಅಪರಾಧಕ್ಕೆ ಈ ಶಿಕ್ಷೆಯ ಪ್ರಮಾಣ ಸಾಕಾಗಲಾರದು ಎಂದು ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ಕ್ಯಾಮೆರಾನ್ ಮಂದೆರ್ ಹೇಳಿದ್ದಾರೆ.

ಬ್ರೆಂಟನ್ ಅಪರಾಧ ಕ್ರೂರವಾಗಿದೆ. ಆತನ ಅಪರಾಧಕ್ಕೆ ಜೀವಾವಧಿ ಶಿಕ್ಷೆಯೂ ಕಡಿಮೆ. ಒಂದು ಮಾರಕ ಸಿದ್ಧಾಂತಕ್ಕಾಗಿ ಆತ ಹಲವರಿಗೆ ಹಾನಿ ಉಂಟು ಮಾಡಿದ್ದಾನೆ. ಆತ ಅಮಾನವೀಯ ಕೃತ್ಯ ಎಸಗಿದ್ದಾನೆ. ಆ ದಾಳಿಯಲ್ಲಿ ಮೂರು ವರ್ಷದ ಮಗು ಕೂಡ ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ ಪರೋಲ್ ಇಲ್ಲದ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ತೀರ್ಪಿನಲ್ಲಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

- Advertisement -

ಸಾಮಾನ್ಯವಾಗಿ ಜೈಲು ಶಿಕ್ಷೆಗೆ ಗುರಿಯಾದವರಿಗೆ ತುರ್ತು ಅಗತ್ಯ ಕಂಡುಬಂದಲ್ಲಿ, ಮನೆಯಲ್ಲಿ ಯಾರಾದರೂ ಸಾವು, ಮದುವೆ ಇತ್ಯಾದಿ ಸಮಾರಂಭಗಳಿದ್ದಲ್ಲಿ ಕೆಲವು ದಿನಗಳ ಮಟ್ಟಿಗೆ ಪರೋಲ್ ಬಿಡುಗಡೆಯಾಗುವ ಅವಕಾಶವಿರುತ್ತದೆ. ಆದರೆ, ನ್ಯೂಜಿಲ್ಯಾಂಡ್ ನಲ್ಲಿ ಇದೇ ಮೊದಲ ಬಾರಿಗೆ ಪರೋಲ್ ಇಲ್ಲದ ಜೀವಾವಧಿ ಶಿಕ್ಷೆ ಬ್ರೆಂಟನ್ ಗೆ ನೀಡಲಾಗಿದೆ.

ಫೋಟೊ ಕೃಪೆ : ಬಿಬಿಸಿ

Join Whatsapp