ನವದೆಹಲಿ : ನ್ಯಾಯಾಂಗ ನಿಂದನೆ ಕಾಯ್ದೆ, 1971ರ ಉಪ ಕಲಂ ಒಂದರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ‘ದ ಹಿಂದೂ’ ಮಾಜಿ ಸಂಪಾದಕ ಎನ್. ರಾಮ್, ಮಾಜಿ ಕೇಂದ್ರ ಸಚಿವ ಅರುಣ್ ಶೌರಿ, ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ ನಲ್ಲಿ ದಾವೆಯೊಂದನ್ನು ಹೂಡಿದ್ದಾರೆ.
ನ್ಯಾಯಾಲಯದ ಘನತೆಯನ್ನು ಕಡಿಮೆ ಮಾಡುವ ಅಥವಾ ನ್ಯಾಯಾಲಯವನ್ನು ಹಗರಣದಲ್ಲಿ ಸಿಲುಕಿಸುವ ಆಧಾರದಲ್ಲಿ, ಕ್ರಿಮಿನಲ್ ನ್ಯಾಯಾಂಗ ನಿಂದನೆ ಎಂದು ಪರಿಗಣಿಸುವ ಕಾಯ್ದೆಯ ಈ ಅಂಶವನ್ನು ಅವರು ಪ್ರಶ್ನಿಸಿದ್ದಾರೆ. ಕಾಯ್ದೆಯ ಕಲಂ 2 (ಸಿ) (ಐ) ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುತ್ತದೆ, ಅಲ್ಲದೆ ಇದು ಅಸ್ಪಷ್ಟವಾಗಿದ್ದು, ವ್ಯಕ್ತಿನಿಷ್ಠವಾಗಿದೆ ಮತ್ತು ಸ್ಪಷ್ಟವಾಗಿ ಅನಿಯಂತ್ರಿತವಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಭೂಷಣ್ ಪ್ರಸ್ತುತ ಸುಪ್ರೀಂ ಕೋರ್ಟ್ ನಲ್ಲಿ ಎರಡು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದರೆ, ರಾಮ್ ಮತ್ತು ಶೌರಿ ಕೂಡ ಈ ಹಿಂದೆ ಇಂತಹ ಪ್ರಕರಣ ಎದುರಿಸಿದ್ದಾರೆ.