ನೀವು ನಮ್ಮ ಗ್ರಾಹಕರಲ್ಲ, ಓದುಗರು…

Prasthutha|

ಹಣದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ!
ಮುಸ್ಲಿಮ್ ವ್ಯಕ್ತಿಯ ಪ್ರಾಣ ಉಳಿಸಿ ಸೌಹಾರ್ದತೆ ತೋರಿದ ಹಿಂದು ಯುವಕ!
ಮಾದರಿ ಸಮಾಜ ಸೇವೆ ನಡೆಸಿದ ಪೊಲೀಸ್!
ಮತ್ತು
ನಗರದಲ್ಲಿ ಪ್ರತ್ಯಕ್ಷಗೊಂಡ ಚಿರತೆ!

- Advertisement -

ಮನುಷ್ಯ ಅಥವಾ ಅವನನ್ನು ಒಳಗೊಂಡ ಒಂದು ಸಮಾಜದಲ್ಲಿ ಸಹಜವಾಗಿ ಇರಬೇಕಾಗಿದ್ದ ಮೂಲಗುಣಗಳು ಅಪರೂಪವಾಗಿ ಪ್ರಕಟಗೊಂಡಾಗ ಅದು ನಗರದಲ್ಲಿ ಚಿರತೆ ಪ್ರತ್ಯಕ್ಷಗೊಂಡಷ್ಟೇ ವಿಶೇಷ ಸುದ್ದಿಯಾಗಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತದೆ. ಇಲ್ಲಿ ಹಣದ ಬ್ಯಾಗ್ ಮರಳಿಸಿದ ಚಾಲಕನ ಸುದ್ದಿ ವಿಶೇಷ ಸ್ಥಾನ ಪಡೆದುಕೊಂಡರೆ, ಹಣ ಎಗರಿಸಿದ ಶಾಸಕನ ಸುದ್ದಿ ಮಾಮೂಲಿಯಂತಾಗಿಬಿಟ್ಟಿದೆ. ಜನಪ್ರತಿನಿಧಿಗಳ ಗಣ ಅರ್ಥಾತ್ ಒಟ್ಟು ಆಡಳಿತ ವ್ಯವಸ್ಥೆಯು ಎಗರಿಸಿದ್ದು ಹಣ ಮಾತ್ರವಲ್ಲ; ಪ್ರಾಮಾಣಿಕತೆ, ನಂಬಿಕೆ, ಸೌಹಾರ್ದತೆ, ಮಾನವೀಯತೆಯ ಗುಣಗಳನ್ನೊಳಗೊಂಡ ಸಾಮಾಜಿಕ ನ್ಯಾಯದ ವ್ಯವಸ್ಥೆಯನ್ನೇ ಕೊಳ್ಳೆಹೊಡೆದಿದೆ. ಇದರ ಪರಿಣಾಮವೇ ಅಲ್ಲೊಂದು ಇಲ್ಲೊಂದು ಪ್ರಾಮಾಣಿಕತೆ, ಸೌಹಾರ್ದತೆ, ಮಾನವೀಯತೆಯ ಕಾರ್ಯಗಳು ವಿಶೇಷ ಸುದ್ದಿಯಾಗಿ ಪರಿಗಣಿಸಲ್ಪಡುತ್ತಿರುವುದು. ಇಂತಹ ವೈರುಧ್ಯ ಸಂದರ್ಭದಲ್ಲೂ ಸಾಮಾಜಿಕ ನ್ಯಾಯಕ್ಕಾಗಿ ಮಿಡಿಯುತ್ತಿರುವ ಮತ್ತು ದುಡಿಯುತ್ತಿರುವ ಸುದ್ದಿ ಮಾಧ್ಯಮಗಳು ಕೂಡ ಇಂದು ಮೂರು ಕಾರಣಗಳಿಗಾಗಿ ಸುದ್ದಿಯಾಗುತ್ತಿವೆ. ಮೊದಲನೆಯದಾಗಿ ಆರಂಭಗೊಂಡಿರುವುದಕ್ಕೆ, ಎರಡನೆಯದು ಪತ್ರಿಕಾ ಧರ್ಮ ಪಾಲಿಸುತ್ತಲೇ ಇನ್ನೂ ಜೀವ ಉಳಿಸಿಕೊಂಡಿರುವುದಕ್ಕೆ, ಮೂರನೆಯದ್ದು ಹೊಸ ಸವಾಲುಗಳನ್ನು ಎದುರಿಸಲು ಇನ್ನಷ್ಟು ಪ್ರಖರವಾಗಿ ಮುನ್ನುಗ್ಗಲು ಪ್ರಯತ್ನಿಸುತ್ತಿರುವುದಕ್ಕೆ. ಈ ಸಾಲಿನಲ್ಲಿ “ಪ್ರಸ್ತುತ” ಪಾಕ್ಷಿಕವು ಎರಡು ಹಂತಗಳನ್ನು ದಾಟಿ ಮೂರನೆಯ ಪಂಕ್ತಿಗೆ ಸೇರುತ್ತಿದೆ ಎಂಬುದು ಅಭಿಮಾನದ ಸಂಗತಿ.

- Advertisement -

ಸದ್ಯ ಜನರು ಸುದ್ದಿ ಮಾಧ್ಯಮವೊಂದರ ಓದುಗರೋ, ವೀಕ್ಷಕರೋ ಎನಿಸಿಕೊಳ್ಳುವುದಕ್ಕಿಂತ ಗ್ರಾಹಕರಾಗಿ ಮಾರ್ಪಡಿಸಲ್ಪಟ್ಟಿದ್ದಾರೆ. ಮಾಧ್ಯಮಕ್ಕೆ ವಕ್ಕರಿಸಿದ ಟಿಆರ್ ಪಿ ಟ್ರೆಂಡ್ ಮತ್ತು ನಿರ್ದಿಷ್ಟ ಸಿದ್ಧಾಂತದ ವಕಾಲತುವಹಿಸುವಿಕೆಯು ಒಟ್ಟು ಸಮಾಜದ ಮಾನಸಿಕ ಆರೋಗ್ಯವನ್ನು ಕೆಡಿಸಿ ಬಿಟ್ಟಿದೆ ಎಂಬುದಕ್ಕೆ ಕೊರೋನ ರೋಗವೂ ಧರ್ಮಾಧಾರಿತವಾಗಿ ಗುರುತಿಸಲ್ಪಟ್ಟಿರುವುದೇ ಸಾಕ್ಷಿ. ಇಂತಹ ಸನ್ನಿವೇಶದಲ್ಲೂ ಅದೇ ಮಾಧ್ಯಮದ ವಿರುದ್ಧ ಮತ್ತು ಅಂತಹ ಮಾಧ್ಯಮಗಳಿಂದ ಪ್ರಭಾವಿತರಾದ ಕ್ರಿಮಿನಲ್ ಗಳ ವಿರುದ್ಧ ಹೋರಾಟಕ್ಕಿಳಿದ ಮಾಧ್ಯಮವನ್ನು ನಾವು ಅಭಿನಂದಿಸಲೇಬೇಕು.

ನೀವು “ಪ್ರಸ್ತುತ”ವನ್ನು ಓದಿರಿ ಎಂದು ನಾವು ನಿಮ್ಮನ್ನು ಹುರಿದುಂಬಿಸುತ್ತಿರುವುದು ಮಾರುಕಟ್ಟೆಯ ದೃಷ್ಟಿಕೋನದಿಂದ ಅಲ್ಲ. ನೀವು “ಪ್ರಸ್ತುತ” ವೆಬ್ ಪೋರ್ಟಲ್ ಓದುವ ಮೊದಲು “ಪ್ರಸ್ತುತ”ವು ಪ್ರಸಕ್ತ ವಿದ್ಯಮಾನಗಳನ್ನು ಓದಿ ಮುಗಿಸಿರುತ್ತದೆ. ಪ್ರಸ್ತುತದ ಓದು, ಅಧ್ಯಯನ ವಿಶ್ಲೇಷಣೆಯು ಓದುಗರನ್ನು ಗ್ರಾಹಕರನ್ನಾಗಿಸುವ ಬದಲು ಕಾರ್ಯಕರ್ತರನ್ನಾಗಿಯೋ, ಹೋರಾಟಗಾರರನ್ನಾಗಿಯೋ ರೂಪಿಸುತ್ತದೆ ಎಂಬುದಕ್ಕೆ ಪಾಕ್ಷಿಕದ 13 ವರ್ಷಗಳ ಹೆಜ್ಜೆ ಗುರುತುಗಳೇ ಸಾಕ್ಷಿ. ನಮ್ಮದು ಮಾತ್ರ ಸತ್ಯ, ಉಳಿದೆಲ್ಲವೂ ಮಿಥ್ಯೆ ಎನ್ನುವ ಜಾಹೀರಾತು ಒಕ್ಕಣೆಯನ್ನು ಪ್ರಸ್ತುತ ಘೋಷಿಸುವುದಿಲ್ಲ. “ಪ್ರಸ್ತುತ” ಪಾಕ್ಷಿಕವು ದಮನಿತ, ಶೋಷಿತ ಸಮುದಾಯದ ಧ್ವನಿ ಎಂದು ಅದರ ಫಲಾನುಭವಿಗಳೇ ನೀಡಿರುವ ಘೋಷಣೆಗಳು.

ಕಳೆದ 14 ವರ್ಷಗಳಿಂದ ನಾವು ನಡೆಸಿದ ಅಕ್ಷರ ಕ್ರಾಂತಿಯು ಇಂದು ಹೊಸ ಕಾಂತಿ ಪಡೆದುಕೊಂಡಿದೆ. ಕಪ್ಪುಬಿಳುಪು 8 ಪುಟಗಳ ಟ್ಯಾಬ್ಲೋಯಿಡ್ ಮಾಸಿಕ ಪತ್ರಿಕೆಯಾಗಿ ಆರಂಭವಾದ ಪ್ರಸ್ತುತ ಮಾಸಿಕ, ಎರಡೇ ವರ್ಷದಲ್ಲಿ ವರ್ಣರಂಜಿತ 60 ಪುಟಗಳ ಪಾಕ್ಷಿಕವಾಗಿ ಇದೀಗ 14ನೆ ವರ್ಷದಲ್ಲಿ ಅಂತರ್ಜಾಲ ವೆಬ್ ಪೋರ್ಟಲ್ ಆಗಿ ಬೆಳೆದು ಬಂದಿದೆ. ನಮ್ಮ ಬೆಳವಣಿಗೆಯು ಸಹೋದ್ಯಮಗಳೊಂದಿಗಿನ ಸ್ಪರ್ಧೆಯ ಫಲಿತಾಂಶವಲ್ಲ. ಮಾಧ್ಯಮ ಕ್ಷೇತ್ರದಲ್ಲಿ ನ್ಯಾಯದ ವಾದಕರಾಗಿ, ಪ್ರಜಾತಂತ್ರದ ಕಾವಲುಗಾರರಾಗಿ ಇನ್ನಷ್ಟು ಮಾಧ್ಯಮಗಳು ಬೆಳೆದು ಬರಬೇಕು ಎಂದು ನಿರೀಕ್ಷಿಸುತ್ತೇವೆ. ನಮ್ಮ ಉದ್ದೇಶವು ಸಾಮಾಜಿಕ ನ್ಯಾಯದ ಪ್ರತಿಷ್ಠಾಪನೆ. ಆ ನಿಟ್ಟಿನಲ್ಲಿ ನಮ್ಮ ಅಕ್ಷರಕ್ರಾಂತಿಯು ಅಚಲ ಮತ್ತು ರಾಜಿರಹಿತ.

ಪ್ರಸ್ತುತ ಇನ್ನಷ್ಟು ಬೆಳೆಯಲಿದೆ… ಜೊತೆಗೆ ಮಾನವಹಕ್ಕು ಹೋರಾಟಗಾರರನ್ನು ಬೆಳೆಸಲಿದೆ… ನಿಮ್ಮ ಎಂದಿನ ಪ್ರಾಮಾಣಿಕ, ನಿಸ್ವಾರ್ಥ ಸಹಕಾರವನ್ನು ಪ್ರಸ್ತುತ ನಿರೀಕ್ಷಿಸುತ್ತದೆ….

ಕೆ.ಎಂ.ಶರೀಫ್
ಪ್ರಧಾನ ಸಂಪಾದಕರು
ಪ್ರಸ್ತುತ



Join Whatsapp