ಬೆಂಗಳೂರು: ‘ಸಚಿನ್ ಪಾಂಚಾಳ್ ಕುಟುಂಬದವರ ಜೊತೆ ನಾನು ಮಾತನಾಡಿದ್ದೇನೆ. ಬಿಜೆಪಿಯವರು ಹೇಳಿದಂತೆಲ್ಲ ನಾವು ಕುಣಿಯಲು ಆಗುವುದಿಲ್ಲ. ಸಚಿನ್ ಕುಟುಂಬದವರಿಗೆ ನಾನೂ ಭರವಸೆ ನೀಡಿದ್ದೇನೆ. ಪಾರದರ್ಶಕವಾಗಿ ತನಿಖೆ ಮಾಡಿಸುವುದು ಸರ್ಕಾರದ ಜವಾಬ್ದಾರಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಪ್ರಕರಣದಲ್ಲಿ ಬಿಜೆಪಿ ಮಾಡುತ್ತಿರುವ ಟೀಕೆ– ಆರೋಪಗಳಿಗೆ ಸಂಬಂಧಿಸಿದಂತೆ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಪ್ರಿಯಾಂಕ್, ‘ಬಿಜೆಪಿಯವರಿಗೆ ಸಿಬಿಐ ಮೇಲೆ ಯಾಕೆ ಪ್ರೀತಿ? ಬಿಜೆಪಿಯವರ ಸ್ಕ್ರಿಪ್ಟ್ ಗೆ ನಾವು ನಟನೆ ಮಾಡಲು ಆಗುವುದಿಲ್ಲ. ಒಂದು ಜೀವ ಹೋಗಿದೆ, ಅದಕ್ಕೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ’ ಎಂದರು.
‘ಸರ್ಕಾರದ ವಿರುದ್ದ ಹೇಳಿಕೆ ನೀಡುವಂತೆ ಸಚಿನ್ ಕುಟುಂಬದವರಿಗೆ ಬಿಜೆಪಿಯವರು ಒತ್ತಡ ಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಜಕೀಯ ಬೆರೆಸುತ್ತಿರುವುದು ತಪ್ಪಲ್ಲವೇ? ಹೆಣ ಬಿದ್ದರೆ ಸಾಕು, ಬಿಜೆಪಿಯವರಿಗೆ ಸಂಭ್ರಮ. ಏನೇ ಆದರೂ ಸಚಿನ್ ಕುಟುಂಬಕ್ಕೆ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮದು’ ಎಂದರು.
‘ಚಂದು ಪಾಟೀಲ ಯಾರು? ಸುಪಾರಿ ಕೊಡಲು ನಮಗೆ ಬೇರೆ ಕೆಲಸ ಇಲ್ಲವೇ? ಕಲಬುರಗಿಯಲ್ಲಿ ಸುಪಾರಿ ರಾಜಕೀಯ ಮಾಡಿಕೊಂಡು ಬಂದಿಲ್ಲ ನಾವು. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರದ್ದು ಅತಿ ಆಗುತ್ತಿದೆ. ನಮ್ಮ ತಂದೆಯವರಿಗೆ ಗೌರವ ಕೊಟ್ಟು ನಾನೂ ಸುಮ್ಮನೆ ಇದ್ದೇನೆ. ನಮಗೂ ಮಾತನಾಡಲು ಬರುತ್ತದೆ. ನಾವು ಬೀದಿಗೆ ಇಳಿದರೆ ನೀವು (ಬಿಜೆಪಿಯವರು) ಮನೆ ಸೇರಬೇಕಾಗುತ್ತದೆ’ ಎಂದು ವಾಗ್ದಾಳಿ ನಡೆಸಿದರು.