ನಕ್ಸಲ್ ಚಟುವಟಿಕೆ ಆರೋಪದ ಮೇಲೆ ಬಂಧಿತರಾಗಿ 70 ದಿನಗಳ ಕಾಲ ಜೈಲಿನಲ್ಲಿದ್ದ ಸಾಮಾಜಿಕ ಹೋರಾಟಗಾರ, ಪತ್ರಕರ್ತ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ವಿರುದ್ಧದ ಎಲ್ಲಾ ಪ್ರಕರಣಗಳನ್ನು ರಾಯಚೂರು ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ.
ಕಲಂ 143, 147, 148, 307, 355, 385, 120(ಬಿ) 124(ಎ) ಸೇರಿದಂತೆ ಹಲವು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದು, 25 ವರ್ಷಗಳಿಂದ ಅವರು ತಲೆ ಮರೆಸಿಕೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ರಾಯಚೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರ ಬಳಿಕ ಕಳೆದ ಅಕ್ಟೋಬರ್ ನಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರು “ವಿನೋದ್” ಎಂಬ ಹೆಸರಿನಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ರಾಯಚೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಅವರ ವಿರುದ್ಧ 4 ಪ್ರಕರಣಗಳ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳು 25 ವರ್ಷಗಳ ಹಿಂದಿನದ್ದು ಮತ್ತು ಇದರ ಆಧಾರದಲ್ಲಿ ಅವರನ್ನು ಬಂಧಿಸಲಾಗಿತ್ತು ಎನ್ನಲಾಗಿದೆ. ಇದೀಗ ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.
‘ಪ್ರಸ್ತುತ’ ಪತ್ರಿಕೆಯೊಂದಿಗೆ ಮಾತನಾಡಿದ ದೊಡ್ಡಿಪಾಳ್ಯ ನರಸಿಂಹಮೂರ್ತಿ, “ನ್ಯಾಯಾಲಯಗಳು ಪ್ರಜಾಪ್ರಭುತ್ವ, ಕಾನೂನು ಮತ್ತು ಪ್ರಜೆಗಳ ಹಕ್ಕುಗಳನ್ನು ರಕ್ಷಿಸಲು ವಿಫಲವಾಗಿರುವ ಇಂತಹ ಒಂದು ಸಂದರ್ಭದಲ್ಲಿ ನನಗೆ ಸಂಬಂಧಿಸಿದ ಕೇಸಿನಲ್ಲಿ ನ್ಯಾಯ ದೊರಕಿರುವುದು ಅಚ್ಚರಿದಾಯಕ ವಿಷಯ. ಈ ಹಿನ್ನೆಲೆಯಲ್ಲಿ ನನ್ನ ಕೇಸಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿ ನನಗೆ ನ್ಯಾಯ ದೊರಕಿಸಿದ ನ್ಯಾಯಾಲಯಕ್ಕೆ ಧನ್ಯವಾದಗಳು. 26 ವರ್ಷಗಳ ಹಿಂದಿನ ಎರಡು ಕೇಸುಗಳು ಮತ್ತು ಸುಮಾರು 20 ವರ್ಷಗಳ ಹಿಂದಿನ ಇನ್ನೆರಡು ಕೇಸುಗಳಲ್ಲಿ ನನಗೆ ಸಂಪರ್ಕ ಕಲ್ಪಿಸಲಾಗಿತ್ತು. ಈ ಕೇಸುಗಳಿಗೆ ಸಂಬಂಧಿಸಿ ವಿಚಾರಣೆ ನಡೆದು ಬಂಧಿತರು ಈ ಹಿಂದೆಯೇ ಖುಲಾಸೆಗೊಂಡಿದ್ದಾರೆ. ನನ್ನ ಬಂಧನದ ವೇಳೆ ಸಮಾಜ ಸ್ಪಂದಿಸಿದ ರೀತಿ ಬಹಳ ವಿಶೇಷವಾಗಿತ್ತು. ಪ್ರಗತಿಪರರು, ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು, ರೈತ ಸಂಘಟನೆ ಮೊದಲಾದ ಸಂಘಟನೆಗಳು ನನ್ನ ಬೆಂಬಲಕ್ಕೆ ನಿಂತಿದ್ದರು. ನನಗಾಗಿ ಮಿಡಿದ ಎಲ್ಲಾ ಸಂಗಾತಿಗಳಿಗೂ, ಸಾಮಾಜಿಕ ಕಾರ್ಯಕರ್ತರಿಗೂ ನಾನು ಕೃತಜ್ಞನಾಗಿದ್ದೇನೆ ಮತ್ತು ನನ್ನ ಸಾಮಾಜಿಕ ಹೋರಾಟವನ್ನು ಮುಂದುವರಿಸಲಿದ್ದೇನೆ” ಎಂದು ಹೇಳಿದರು.