ಬೆಂಗಳೂರು : ದುಷ್ಕರ್ಮಿಯೊಬ್ಬ ಪ್ರವಾದಿ ಮುಹಮ್ಮದ್ ಪೈಗಂಬರರನ್ನು ನಿಂದಿಸಿ ಫೇಸ್ ಬುಕ್ ಪೋಸ್ಟ್ ಹಾಕಿದ ನಂತರ ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳುತ್ತಿದ್ದಂತೆಯೇ, ಕಾವಲ ಭೈರಸಂದ್ರದ ದೇವಸ್ಥಾನವೊಂದರ ರಕ್ಷಣೆಗೆ ಮುಸ್ಲಿಮ್ ಯುವಕರು ಮುಂದಾದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ, ಮುಸ್ಲಿಂ ಯುವಕರ ಗುಂಪು ಮಾನವ ಸರಪಳಿ ರಚಿಸಿ ದೇವಸ್ಥಾನದ ರಕ್ಷಣೆಗೆ ನಿಂತರು ಎನ್ನಲಾಗಿದೆ.
ನಾವು ಪ್ರವಾದಿ ನಿಂದಕರ ವಿರುದ್ಧ ಪ್ರತಿಭಟಿಸಲು ಇಲ್ಲಿ ಸೇರಿದ್ದೇವೆ, ಹೊರತು ಯಾವುದೇ ಧರ್ಮದ ವಿರುದ್ಧ ಅಲ್ಲ. ಈ ದೇವಸ್ಥಾನಕ್ಕಾಗಲಿ, ಜನರಿಗಾಗಲಿ ಕಿಂಚಿತ್ತೂ ಹಾನಿಯಾಗದಂತೆ ರಕ್ಷಿಸುವುದು ನಮ್ಮ ಕರ್ತವ್ಯವೆಂದು ಈ ಮಾನವ ಸರಪಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಯುವಕರು ಹೇಳಿದ್ದಾರೆ.
ಈ ಯುವಕರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಸೌಹಾರ್ದ ಪ್ರಿಯರಿಂದಲೇ ದೇಶ ಕಟ್ಟಲು ಸಾಧ್ಯ ಎಂದು ಹಲವರು ಬಣ್ಣಿಸಿದ್ದಾರೆ.