ದೆಹಲಿ ಜೆಎನ್‌ಯುಗೆ ಸ್ವಾಮಿ ವಿವೇಕಾನಂದರ ಹೆಸರಿಡಬೇಕು : ಸಿ.ಟಿ. ರವಿ

Prasthutha|

ಹೊಸದಿಲ್ಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವನ್ನು ಮರುನಾಮಕರಣ ಮಾಡಿ ಸ್ವಾಮಿ ವಿವೇಕಾನಂದರ ಹೆಸರಿಡಬೇಕೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒತ್ತಾಯಿಸಿದ್ದಾರೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸಿ.ಟಿ.ರವಿ ಟ್ವಿಟರ್‌ನಲ್ಲಿ ಈ ಮನವಿ ಮಾಡಿದ್ದಾರೆ.

- Advertisement -

“ಸ್ವಾಮಿ ವಿವೇಕಾನಂದರು ಭಾರತದ ಕಲ್ಪನೆಗಾಗಿ ಬದುಕಿದವರು, ಅವರ ತತ್ವ ಮತ್ತು ಮೌಲ್ಯಗಳು ಭಾರತದ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವನ್ನು ಸ್ವಾಮಿ ವಿವೇಕಾನಂದ ಯುನಿವರ್ಸಿಟಿ ಎಂದು ಮರುನಾಮಕರಣ ಮಾಡುವುದರಿಂದ ಭಾರತದ ದೇಶಭಕ್ತ ಸಂತನ ಜೀವನವು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಬಹುದು” ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ದೆಹಲಿ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಮತ್ತು ಮನೋಜ್ ತಿವಾರಿ ಸೇರಿದಂತೆ ಬಿಜೆಪಿ ನಾಯಕರು ರವಿ ಅವರ ಟ್ವೀಟ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೆಎನ್‌ಯು ಹೆಸರನ್ನು ಬದಲಾಯಿಸಬೇಕೆಂಬ ರವಿ ಅವರ ಬೇಡಿಕೆ ಸಮರ್ಥನೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜೆಎನ್‌ಯು ಹೆಸರಿನಲ್ಲಿ ಬದಲಾವಣೆ ತರಬೇಕೆಂದು 2019ರಲ್ಲೂ ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಆಗ ಬಿಜೆಪಿ ನಾಯಕ ಹನ್ಸ್ ರಾಜ್ ಅವರು ಜೆಎನ್‌ಯುಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಇಡಬೇಕೆಂದು ಒತ್ತಾಯಿಸಿದ್ದರು.

- Advertisement -

ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿ 1969 ರಲ್ಲಿ ದೆಹಲಿಯಲ್ಲಿ ಜೆಎನ್‌ಯು ಸ್ಥಾಪಿಸಲಾಯಿತು. ನಂತರ, ವಿಶ್ವವಿದ್ಯಾಲಯವು ಪ್ರಗತಿಪರ ವಿಚಾರಗಳು ಮತ್ತು ರಾಜಕೀಯ ಚರ್ಚೆಗಳಿಗೆ ಒಂದು ಪ್ರಮುಖ ವೇದಿಕೆಯಾಯಿತು.



Join Whatsapp