ದೆಹಲಿಯಲ್ಲಿ ರೈತ ಕ್ರಾಂತಿ; ಒಟ್ಟು 19 ಮಂದಿಗೆ ಗಾಯ

Prasthutha|

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದ ಟ್ರ್ಯಾಕ್ಟರ್ ಜಾಥಾದಲ್ಲಿ ಹಿಂಸಾಚಾರದ ವೇಳೆ ಕನಿಷ್ಠ 19 ಮಂದಿ ಗಾಯಗೊಂಡಿದ್ದು, ದೆಹಲಿಯ ಎರಡು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿತ್ತು. ಅವರಲ್ಲಿ ಹೆಚ್ಚಿನವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಗಳ ವೈದ್ಯರು ತಿಳಿಸಿದ್ದಾರೆ.
ಆರು ಮಂದಿಯನ್ನು ರಾಮ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದೆ.
ಅವರೆಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಒಂದೆರಡು ಗಂಟೆಗಳ ನಂತರ ತುರ್ತು ವಿಭಾಗದಿಂದ ಬಿಡುಗಡೆ ಮಾಡಲಾಯಿತು. ಅವರು ಮಧ್ಯಾಹ್ನ ಆಸ್ಪತ್ರೆಗೆ ಬಂದಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಒಂಬತ್ತು ಪ್ರತಿಭಟನಕಾರರು ಮತ್ತು ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ದೆಹಲಿ ಸರ್ಕಾರ ನಡೆಸುತ್ತಿರುವ ಲೋಕ ನಾಯಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದೆ.
ಕಳೆದ ವರ್ಷ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಸುಧಾರಣಾ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಳೆದ ಎರಡು ತಿಂಗಳುಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಇಂದು ದೆಹಲಿಯ ಕೇಂದ್ರ ಸ್ಥಾನಕ್ಕೆ ಟ್ರಾಕ್ಟರ್ ಜಾಥಾ ನಡೆಸಿದ್ದರು.



Join Whatsapp