ಮುಂಬೈ : ತಮ್ಮ ತಂದೆಯವರನ್ನು ಶಿಕ್ಷಿಸಲು ರಾಷ್ಟ್ರೀಯ ತನಿಖಾ ತಂಡ (ಎನ್ ಐಎ) ಕೊರೋನಾ ಸೋಂಕಿನ ಸಂದರ್ಭವನ್ನು ದುರ್ಬಳಕೆ ಮಾಡುತ್ತಿದೆ ಎಂದು ಖ್ಯಾತ ವಿಚಾರವಾದಿ ವರವರ ರಾವ್ ಅವರ ಮಗಳು ಪೆಂಡ್ಯಾಳ ಪಾವನಾ ಆಪಾದಿಸಿದ್ದಾರೆ. ವರವರ ರಾವ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ಬಾಂಬೆ ಹೈಕೋರ್ಟ್ ನಲ್ಲಿ ಎನ್ ಐಎ ಅಫಿದಾವಿತ್ ದಾಖಲಿಸಿದೆ. ರಾವ್ ಅವರು ಜಾಮೀನು ಪಡೆಯಲು ಕೋವಿಡ್-19 ಮತ್ತು ವೃದ್ಧಾಪ್ಯದ ಕಾರಣಗಳ ದುರ್ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಎನ್ ಐಎ ತನ್ನ ಅಫಿದಾವಿತ್ ನಲ್ಲಿ ಆಪಾದಿಸಿದೆ.
“ಅವರು (ಎನ್ ಐಎ) ಪ್ರತೀಕಾರದ ಉದ್ದೇಶದಲ್ಲಿದ್ದಾರೆ. ಅವರು ಕ್ರೂರಿಗಳು. ಅಮಾನವೀಯ ಎಂಬ ಪದವನ್ನು ಬಳಸಲೂ ನಾನು ಬಯಸುತ್ತೇನೆ. ಜಾಮೀನು ಅರ್ಜಿ ವಿರೋಧಿಸಿ ಸಲ್ಲಿಸಲಾದ ಕಳೆದ ಅಫಿದಾವಿತ್ ನಲ್ಲೂ ಅವರು ಇದೇ ವಾದ ಮಂಡಿಸಿದ್ದರು. ಸೋಂಕಿನ ಕಾರಣವನ್ನಿಟ್ಟುಕೊಂಡು ಜಾಮೀನು ಅರ್ಜಿ ಸಲ್ಲಿಸಲಾಗಿದೆ ಎಂದು ವಾದಿಸಿದ್ದಾರೆ. ಸುಧಾ ಭಾರದ್ವಾಜ್ ವಿಚಾರದಲ್ಲೂ ಅವರು ಇದೇ ವಾದ ಮಂಡಿಸಿದ್ದಾರೆ ಎಂದು ಪಾವನಾ ಹೇಳಿದ್ದಾರೆ.
“ಸೋಂಕಿನ ಸಂದರ್ಭವನ್ನು ಅವರು ಶಿಕ್ಷಿಸಲು ಬಳಸಿಕೊಳ್ಳುತ್ತಿದ್ದಾರೆ, ತಮಗೆ ಬೇಕಾದುದನ್ನು ಮಾಡಲು ಅವರು ಸೋಂಕಿನ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರು (ವರವರ ರಾವ್) ಅಥವಾ ಭೀಮಾ ಕೋರೆಗಾಂವ್ ಆರೋಪಿಗಳು ಈ ಕಾರಣ ಬಳಸಿಕೊಳ್ಳುತ್ತಿದ್ದಾರೆ ಎಂದು ಎನ್ ಐಎ ಹೇಳುತ್ತಿದೆ. ಅವರು(ಎನ್ ಐಎ) ಅಫಿದಾವಿತ್ ಬರೆಯುವ ರೀತಿಯಲ್ಲಿ ಇನ್ನೊಂದು ವಿಷಯ ಗಮನಕ್ಕೆ ತರಲು ಬಯಸುತ್ತೇನೆ. ಜಾಮೀನು ಅರ್ಜಿಗೂ ಸುಳ್ಳು ಆರೋಪಗಳು ಮತ್ತು ವಾದಗಳನ್ನು ಮಂಡಿಸಿ, ವಿಚಾರಣೆಯಿಲ್ಲದ ಅಥವಾ ವಿಚಾರಣೆಗೂ ಮೊದಲೇ ಪೂರ್ವಾಗ್ರಹ ಹೊಂದುವಂತೆ ಮಾಡಲು ಅವರು ಯತ್ನಿಸುತ್ತಿದ್ದಾರೆ ಎಂದು ಪಾವನಾ ತಿಳಿಸಿದ್ದಾರೆ.
ಮಾನವೀಯ ನೆಲೆಯಲ್ಲಿನ ಆಧಾರವು ಅನ್ವಯವಾಗುವುದೇ ಇಲ್ಲ ಎಂಬ ರೀತಿಯಲ್ಲಿ, ಸುಳ್ಳುಗಳನ್ನು ನಿಜವೆಂಬಂತೆ ಬಿಂಬಿಸುತ್ತಿದ್ದಾರೆ. ಮಾನವೀಯ ನೆಲೆಯಲ್ಲಿ ಜಾಮೀನು ಕೇಳಲು ಇವರುಗಳು(ಆರೋಪಿಗಳು) ಯಾವುದೇ ಹಕ್ಕು ಹೊಂದಿರುವುದಿಲ್ಲ, ಅಂತಹ ಚಟುವಟಿಕೆಗಳಲ್ಲಿ ಇವರುಗಳು ತೊಡಗಿಸಿಕೊಂಡಿದ್ದರು ಎಂಬಂತಹ ವಾದವನ್ನು ನೇರವಾಗಿ ಮಂಡಿಸುತ್ತಾರೆ ಎಂದು ಪಾವನಾ ಹೇಳಿದ್ದಾರೆ.