ಬೆಂಗಳೂರು : ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕೇಂದ್ರದ ಬಿ.ಜೆ.ಪಿ ಸರಕಾರದ ಒತ್ತಡಕ್ಕೆ ಮಣಿದು ಎನ್.ಐ.ಎ ಸಲ್ಲಿಸಿರುವ ಚಾರ್ಜ್ ಶೀಟ್ ಪೂರ್ವ ನಿರ್ದೇಶಿತ ಮತ್ತು ಎಸ್.ಡಿ.ಪಿ.ಐ ಪಕ್ಷವನ್ನು ಗುರಿಯಾಗಿಸಿ ರಚಿಸಿರುವುದಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-SDPI ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಮಜೀದ್ ಖಾನ್ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಬೆಂಗಳೂರು ಸಿ.ಸಿ.ಬಿ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಸಂಘಪರಿವಾರದ ಒತ್ತಡದಿಂದ ಕೇಂದ್ರ ಬಿಜೆಪಿ ಸರ್ಕಾರವು ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್.ಐ.ಎಯನ್ನು ಕಳುಹಿಸಿತ್ತು. ಬಿ.ಜೆ.ಪಿ ಸರಕಾರದ ನಿರ್ದೇಶನದಂತೆ ಎನ್.ಐ.ಎ ದೆಹಲಿಯಿಂದಲೇ ಎಸ್.ಡಿ.ಪಿ.ಐ ವಿರುದ್ಧ ಎಫ್.ಐ.ಆರ್. ದಾಖಲಿಸಿ ಬಂದಿತ್ತು. ಈ ಬಗ್ಗೆ ಕಳೆದ ಆರು ತಿಂಗಳಿನಲ್ಲಿ 2000ಕ್ಕೂ ಹೆಚ್ಚು ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಲಾಗಿತ್ತು. ಈ ಪೈಕಿ ಕಾಂಗ್ರೆಸ್ ಮುಖಂಡ ಸಂಪತ್ ರಾಜ್, ಜೆಡಿಎಸ್ ಮತ್ತಿತರ ಪಕ್ಷಗಳ ಮುಖಂಡರುಗಳು ನೇರ ಹೊಣೆಗಾರರು ಹಾಗೂ ಇದರಲ್ಲಿ ರಾಜಕೀಯ ಷಡ್ಯಂತ್ರ ಇದೆ ಎಂದು ಸ್ವತಃ ಅಲ್ಲಿಯ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ತನಿಖೆ ನಡೆಸಿದ ಸಿ.ಸಿ.ಬಿ ಹೇಳಿಕೆ ನೀಡಿರುವುದು ವರದಿಯಾಗಿದ್ದರೂ ತಪ್ಪಿತಸ್ಥರು ಸುಲಭವಾಗಿ ಜಾಮೀನಿನಲ್ಲಿ ಬಿಡುಗಡೆ ಹೊಂದಿರುವುದನ್ನು ಗಮನಿಸಿದರೆ ಅಮಾಯಕರನ್ನು ಸಿಲುಕಿಸಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ಸ್ಪಷ್ಟವಾಗುತ್ತದೆ.
ಜಾಗತಿಕವಾಗಿ ತುಂಬಾ ಗೌರವಿಸಲ್ಪಡುವ ಪ್ರವಾದಿ ಮೊಹಮ್ಮದ್(ಸ.ಅ)ರವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಸಂಘಪರಿವಾರದ ಕಾರ್ಯಕರ್ತ ನವೀನ್ ಎಂಬಾತನ ಕೃತ್ಯದಿಂದ ಈ ಹಿಂಸಾಚಾರ ನಡೆದಿತ್ತು ಎಂಬುದು ವಾಸ್ತವ. ಆದರೂ ನವೀನನ ಮೇಲೆ ದುರ್ಬಲ ಕೇಸು ಹಾಕುವ ಮೂಲಕ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಮಾಜಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಫೈರೋಜ್ ಎಂಬಾತನನ್ನು ಯುಎಪಿಎ ಕೇಸಿನಲ್ಲಿ ಮುಖ್ಯ ಆರೋಪಿ ಮಾಡಲಾಗಿದೆ. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಧಾರ್ಮಿಕ ಭಾವನೆಗಳ ಬಗ್ಗೆ ಆರೋಪ-ಪ್ರತ್ಯಾರೋಪ ಹಾಕಿ ಕೊಂಡವರಾಗಿದ್ದಾರೆ. ಒಟ್ಟು ಹಿಂಸಾಚಾರದ ಮುಖ್ಯ ಕಾರಣ ಈ ಫೇಸ್ಬುಕ್ ಪೋಸ್ಟ್ಗಳೇ ಎಂದು ತನಿಖಾಧಿಕಾರಿಗಳು ವರದಿ ಮಾಡಿದ್ದಾರೆ. ಆದರೆ ಇಲ್ಲಿ ಧರ್ಮದಾರಿತ ತಾರತಮ್ಯ ನಡೆದಿರುವುದು ಕಾನೂನುಬಾಹಿರವಾಗಿದೆ.
ಎನ್.ಐ.ಎ ತನಿಖಾಧಿಕಾರಿಗಳು ಈ ಪ್ರಕರಣದಲ್ಲಿ ಆರಂಭದಿAದಲೂ ನೇರವಾಗಿ ಎಸ್.ಡಿ.ಪಿ.ಐಯನ್ನು ಸಿಲುಕಿಸಲು ಪ್ರಯತ್ನಪಟ್ಟಿದ್ದಾರೆ. ಇದೇ ರೀತಿ ಭೀಮಾಕೋರೆಗಾವ್ ಹೋರಾಟ ಮಾಡಿದ ದಲಿತ ಹಾಗೂ ಪ್ರಗತಿಪರರ ಮೇಲೆ ಯು.ಎ.ಪಿ.ಎ ಕೇಸು ಜಡಿಯಲಾಗಿತ್ತು. ದೆಹಲಿಯಲ್ಲಿ ಸಿ.ಎ.ಎ ಹಾಗೂ ಎನ್.ಆರ್.ಸಿ ಪ್ರತಿಭಟನೆ ಮಾಡಿದ ನೂರಾರು ವಿದ್ಯಾರ್ಥಿಗಳನ್ನು ದೇಶದ್ರೋಹ ಕಾನೂನಿನಡಿ ಬಂಧಿಸಲಾಗುತ್ತಿದೆ. ಕೇಂದ್ರದ ಬಿ.ಜೆ.ಪಿ ಸರಕಾರದ ಜನವಿರೋಧಿ ನೀತಿಗಳು ಮತ್ತು ಆರ್.ಎಸ್.ಎಸ್ನ ಫ್ಯಾಸಿಸ್ಟ್ ಸಿದ್ಧಾಂತದ ವಿರುದ್ಧ ಧ್ವನಿ ಎತ್ತುತ್ತಿರುವ ಪ್ರಗತಿಪರರನ್ನು, ರೈತರನ್ನು, ವಿದ್ಯಾರ್ಥಿಗಳನ್ನು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕಳೆದ ಆರು ವರ್ಷಗಳಿಂದ ಮೋದಿ ಸರಕಾರ ಯು.ಎ.ಪಿ.ಎ, ಎನ್.ಎಸ್.ಎ ಹಾಗೂ ದೇಶದ್ರೋಹದಂತಹ ಕರಾಳ ಕೇಸುಗಳನ್ನು ಹಾಕಿ ಹಿಂಸಿಸುತ್ತಿರುವುದು ಖಂಡನೀಯ. ಇದರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.
ಬೆಂಗಳೂರು ಹಿಂಸಾಚಾರದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ರವರು ಬಿಡುಗಡೆಗೊಳಿಸಿದ ಸ್ವತಂತ್ರ ಬುದ್ಧಿಜೀವಿಗಳ ಸತ್ಯಶೋಧನಾ ವರದಿಯಲ್ಲಿ ರಾಜ್ಯ ಸರಕಾರದ ಮತ್ತು ಗುಪ್ತಚರ ಇಲಾಖೆಯ ವೈಫಲ್ಯದಿಂದ ಈ ಹಿಂಸಾಚಾರ ನಡೆದಿದೆ ಹಾಗೂ ತನಿಖಾ ಸಂಸ್ಥೆಗಳು ಎಸ್.ಡಿ.ಪಿ.ಐ ಪಕ್ಷವನ್ನು ಮತ್ತು ನಿರ್ದಿಷ್ಟ ಸಮುದಾಯವನ್ನು ಗುರಿ ಪಡಿಸುತ್ತಿರುವುದು ಸರಿಯಲ್ಲ ಎಂದು ಉಲ್ಲೇಖಿಸಲಾಗಿದೆ. ಆದರೆ ಸಂಘಪರಿವಾರ ಪ್ರಾಯೋಜಿತ ಸತ್ಯಶೋಧನಾ ವರದಿಯನ್ನೇ ಎನ್.ಐ.ಎ ಆರೋಪಪಟ್ಟಿಯಲ್ಲಿ ನಕಲಿಸಲಾಗಿದೆ. ಈ ಬಗ್ಗೆ ಹಿಂಸಾಚಾರ ನಡೆದ ಮರುದಿನವೇ ಎಸ್.ಡಿ.ಪಿ.ಐ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು. ಎನ್.ಐ.ಎ ತನಿಖೆಯನ್ನು ಗಮನಿಸಿದರೆ ಕೆಲವು ನಿಷ್ಪಕ್ಷ ತನಿಖಾಧಿಕಾರಿಗಳ ಮೇಲೆ ನಿರ್ದಿಷ್ಟ ಪಕ್ಷ ಮತ್ತು ಸಮುದಾಯವನ್ನು ತೇಜೋವಧೆ ಮಾಡುವ ರೀತಿಯಲ್ಲಿ ವರದಿ ಮಾಡುವಂತೆ ಒತ್ತಡ ಹೇರಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿರಪರಾಧಿಗಳ ಪರ ಕಾನೂನಾತ್ಮಕ ಹೋರಾಟದಲ್ಲಿ ಮುಂಚೂಣಿಯಲ್ಲಿ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ, ನ್ಯಾಯವಾದಿ ಅಬ್ದುಲ್ ಮಜೀದ್ ಖಾನ್ (ರಾಜ್ಯ ಉಪಾಧ್ಯಕ್ಷರು), ರಾಜ್ಯ ಮಾಧ್ಯಮ ಉಸ್ತುವಾರಿಗಳಾದ ಅಕ್ರಂ ಹಸನ್, ಪ್ರ.ಕಾರ್ಯದರ್ಶಿಗಳಾದ ಮುಜಾಹಿದ್ ಪಾಶಾ, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ಹೆಚ್.ಎಂ ಗಂಗಪ್ಪ ಉಪಸ್ಥಿತರಿದ್ದರು.