ಬಾಗಲಕೋಟೆ: ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರ ಮಗ ಚಲಾಯಿಸುತ್ತಿದ್ದ ಕಾರು, ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಮೃತಪಟ್ಟಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಸಂಭವಿಸಿದೆ.
ಡಿಸಿಎಂ ಲಕ್ಷ್ಮಣ್ ಸವದಿಯವರ ಹಿರಿಯ ಮಗ ಚಿದಾನಂದ ಸವದಿ, ರಾಷ್ಟ್ರೀಯ ಹೆದ್ದಾರಿ 50 ರ ಕೂಡಲ ಸಂಗಮ ಕ್ರಾಸ್ ಬಳಿ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಕೂಡಲೆಪ್ಪ ಬೋಳಿ (58) ಎಂಬಾತನ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತ ಬೈಕ್ ಸವಾರ ಕೂಡಲೆಪ್ಪ ಬೋಳಿ ಬಾಗಲಕೋಟೆ ತಾಲೂಕು ಚಿಕ್ಕಹಂಡರಗಲ್ ಗ್ರಾಮದ ನಿವಾಸಿಯಾಗಿದ್ದಾರೆ. ಇವರು ಹೊಲಕ್ಕೆ ಹೋಗಿ ವಾಪಸ್ ಬರುವಾಗ ಚಿದಾನಂದ ಸವದಿಯವರ ಕೆಎ-22 ಎಮ್ ಸಿ 5151 ನಂಬರಿನ ಕಾರು ಡಿಕ್ಕಿಯಾಗಿದೆ.
ನಂಬರ್ ಪ್ಲೇಟ್ ಜಖಂ ಮಾಡಿ ಪರಾರಿಯಾಗಲು ಯತ್ನ;
ಅಪಘಾತ ಸಂಭವಿಸಿದಾಗ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಆಸ್ಪತ್ರೆ ಸೇರಿಸುವ ಬದಲು, ಚಿದಾನಂದ ಸವದಿ ತಮ್ಮ ಕಾರಿನ ನಂಬರ್ ಪ್ಲೇಟ್ ಜಖಂಗೊಳಿಸಿ ದಾಖಲೆ ಸಮೇತ ಇನ್ನೊಂದು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಆದರೆ, ಸ್ಥಳೀಯರು ಅವರನ್ನು ಹೋಗಲು ಬಿಡದೆ ಹಿಡಿದಿಟ್ಟಿದ್ದರು. ಬಳಿಕ ಸ್ಥಳಕ್ಕೆ ಹುನಗುಂದ ಪೊಲೀಸರು ಆಗಮಿಸಿ ಚಿದಾನಂದ ಸವದಿಯನ್ನು ಬಿಡಿಸಿ ಕಳಿಸಿದ್ದಾರೆ ಎನ್ನಲಾಗುತ್ತಿದೆ.
ಚಾಲಕನ ಹೆಸರಲ್ಲಿ ದೂರು ದಾಖಲು: ಅಪಘಾತ ನಡೆದಾಗ ಚಿದಾನಂದ ಸವದಿ ನಾನು ಡಿಸಿಎಂ ಲಕ್ಷಣ್ ಸವದಿ ಮಗ ಎಂದು ಸ್ಥಳೀಯರು ಮತ್ತು ಮೃತನ ಸಂಬಂಧಿಕರಿಗೆ ಧಮ್ಕಿ ಹಾಕಿರುವುದಾಗಿ ಆರೋಪಿಸಲಾಗಿದೆ. ಅಪಘಾತ ನಡೆದಾಗ ಚಿದಾನಂದ ಸವದಿಯವರೇ ಕಾರು ಚಲಾಯಿಸುತ್ತಿದ್ದರು ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ಒಟ್ಟು 12 ಜನ ಎರಡು ಕಾರುಗಳಲ್ಲಿ ಪ್ರವಾಸಕ್ಕೆ ಹೋಗಿದ್ದರು. ಹಂಪಿ, ಹೊಸಪೇಟೆ, ಕೊಪ್ಪಳ, ಅಂಜನಾದ್ರಿ ಬೆಟ್ಟ ಸೇರಿದಂತೆ ರಾಜ್ಯದ ವಿವಿಧೆಡೆಗೆ ಪ್ರವಾಸಕ್ಕೆ ಹೋಗಿ ವಾಪಸ್ ಬರುವಾಗ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.