ಡಿಜಿ-ಐಜಿಪಿಯ ಅಭಿಪ್ರಾಯ ಕಡೆಗಣಿಸಿ ಸಂಘಪರಿವಾರ ನಾಯಕರ ಕೇಸು ವಾಪಸ್ ಪಡೆದ ಬಿಜೆಪಿ ಸರಕಾರ

Prasthutha|

ಹಿಂದೂ ಸಮಾಜೋತ್ಸವದ ದ್ವೇಷ ಭಾಷಣ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೇಸ್ ಗಳೂ ರದ್ದು

- Advertisement -

ಬೆಂಗಳೂರು: ಕಾನೂನು ಪರಿಪಾಲನೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಮುಂದೆ ಇಂತಹ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗುವ ಸಂಭವ ಇದೆ ಎಂದು ಡಿಜಿ-ಐಜಿಪಿ ಸ್ಪಷ್ಟನೆ ನೀಡಿದ್ದರೂ ಅದನ್ನು ಕಡೆಗಣಿಸಿದ ಬಿಜೆಪಿ ಸರಕಾರ, ಹಿಂದೂ ಸಮಾಜೋತ್ಸವ, ಜಗಜಾಗೃತಿ ಸಮಾವೇಶ, ಮುಸ್ಲಿಮರ ವಿರುದ್ಧದ ದ್ವೇಷ ಭಾಷಣ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೇಸ್ ಸಹಿತ ಸಂಘಪರಿವಾರದ ನಾಯಕರ 34 ಕ್ಕೂ ಹೆಚ್ಚು ಪ್ರಕರಣಗಳನ್ನು ವಾಪಸ್ ಪಡೆದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಸಚಿವರು, ಶಾಸಕರು ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದು, ಮನವಿಯಂತೆ ಪ್ರತಿಭಟನೆ ಸಂದರ್ಭದಲ್ಲಿ ಕೋಮುದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಗದೀಶ ಕಾರಂತ, ಹಿಂದೂ ಮುಸ್ಲಿಂ ಕೋಮು ಗಲಭೆ ನಡೆಸಲು ಮೆರವಣಿಗೆ ನೆಪದಲ್ಲಿ ಉದ್ರೇಕಕಾರಿ ಘೋಷಣೆ ಕೂಗಿದ ಆರೋಪದಲ್ಲಿ ಹಿಂದುತ್ವ ಕಾರ್ಯಕರ್ತರ ವಿರುದ್ಧ ಮಡಿಕೇರಿ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆಗಳನ್ನು ಸೇರಿಸಿ ಹಲವು ಹಿಂದುತ್ವ ಸಂಘಟನೆಗಳ ಪ್ರಮುಖರ ವಿರುದ್ಧ ದಾಖಲಾಗಿದ್ದ ಒಟ್ಟು 34 ಮೊಕದ್ದಮೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

- Advertisement -

ಬೆಳಗಾವಿ, ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿತ್ರದುರ್ಗ, ಮಂಡ್ಯ, ನಾಗಮಂಗಲ, ಉಪ್ಪಿನಂಗಡಿ, ಶ್ರೀರಂಗಪಟ್ಟಣ, ಬೆಳ್ಳೂರು, ಉಳ್ಳಾಲ, ಬಂಟ್ವಾಳ, ಕಡಬ, ವಿರಾಜಪೇಟೆ, ಮಡಿಕೇರಿ, ಸಿದ್ದಾಪುರ, ಸೋಮವಾರಪೇಟೆ, ದಾವಣಗೆರೆ, ಆಜಾದ್ ನಗರ, ಶಿವಮೊಗ್ಗ, ಬಸವನಬಾಗೇವಾಡಿ, ಇಲಕಲ್ಲ, ಅಫಜಲಪುರ, ಜೇವರ್ಗಿ, ಗೋಣಿಕೊಪ್ಪ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಟಿಪ್ಪು ಜಯಂತಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಧಾರ್ಮಿಕ ದ್ವೇಷ ಹರಡಿರುವುದು ಮತ್ತು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಕೇಸ್ ಗಳನ್ನೂ ರಾಜ್ಯ ಸರಕಾರ ಕೈಬಿಟ್ಟಿದೆ.

ಬಿಜೆಪಿ ಸರಕಾರ ವಾಪಾಸ್ ಪಡೆದ ಪ್ರಕರಣಗಳು

2015 : ಸಂಸದ ಅನಂತ್ ಕುಮಾರ್ ಹೆಗ್ಡೆ, ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ, ಶ್ರೀರಾಮಸೇನಾ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ, ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಸ್ವರೂಪ ಕಾಲಕುಂದ್ರಿ, ಶಾಸಕ ಸಂಜಯ ಪಾಟೀಲ್ ವಿರುದ್ಧ ಟಿಪ್ಪುಜಯಂತಿ ಪ್ರತಿಭಟನೆಯಲ್ಲಿ ದ್ವೇಷಭಾಷಣ ಮಾಡಿದ ಪ್ರಕರಣ

2013: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಗುಂಡಿಯಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಕೋಮು ದ್ವೇಷದ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆಯ ಡಿ.ವಿ. ಲೀಲಾಧರ, ಸುಬ್ರಹ್ಮಣ್ಯ ಉಪಾಧ್ಯಾಯ, ಕೆ.ಪಿ. ಜಗದೀಶ ಮತ್ತು ಜಗದೀಶ ಕಾರಂತ ವಿರುದ್ಧ ಸುಳ್ಯ ಠಾಣೆಯಲ್ಲಿ  ದಾಖಲಾದ ಪ್ರಕರಣ

2016: ನವೆಂಬರ್ 10ರಂದು ಶ್ರೀರಂಗಪಟ್ಟಣದಲ್ಲಿ  ಪುರಸಭೆ ಸದಸ್ಯ ಉಮಾಶಂಕರ್ 25ರಿಂದ 30 ಜನರ ಅಕ್ರಮ ಗುಂಪುಕಟ್ಟಿಕೊಂಡು ಅಕ್ರಮ ಮೆರವಣಿಗೆ ಮಾಡಿ ಕಾನೂನು ಬಾಹಿರ ಘೋಷಣೆ ಕೂಗಿದ ಪ್ರಕರಣ

2015: ಮಡಿಕೇರಿಯಲ್ಲಿ ಬಿಜೆಪಿ ಪಕ್ಷ ಹಾಗೂ ಹಿಂದೂಪರ ಸಂಘಟನೆಗಳು ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಬಂದ್ ನೀಡಿದ್ದು, ಆ ವೇಳೆ ಆರೋಪಿಗಳು ಕಾನೂನುಬಾಹಿರವಾಗಿ ಕಬ್ಬಿಣದ ರಾಡು ಮತ್ತು ಕಲ್ಲುಗಳನ್ನು ಹಿಡಿದು ಪೊಲೀಸರ ಮೇಲೆ ಎಸೆದು ಹಲ್ಲೆ ಎಸಗಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕಟ್ಟಡ ಗ್ಲಾಸಿಗೆ ಕಲ್ಲು ಹೊಡೆದು ಜಖಂಗೊಳಿಸಿದ್ದ ಪ್ರಕರಣ

2015: ಹಾವೇರಿಯಲ್ಲಿ ಹಲಗೇರಿ ಠಾಣೆಯಲ್ಲಿ ಎರಡು ಕೋಮುಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣ

2017: ‘ಮಂಗಳೂರು ಚಲೋ’ ಬೈಕ್ ರಾಲಿ ನಡೆಸಿದ  ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಮೇಲೆ ಮೈಸೂರು ಜಿಲ್ಲೆಯ ಇಲವಾಲ ಠಾಣೆಯಲ್ಲಿ  ದಾಖಲಾದ  ಪ್ರಕರಣ

2017: ಹಿಂದೂ ಜಾಗರಣ ವೇದಿಕೆಯ ಶಿವಾನಂದ ಮಲ್ಲಪ್ಪ ಬಡಿಗೇರ ಮತ್ತು ಇತರ ಎಂಟು ಮಂದಿಯ ಗಡಿಪಾರು ವಿರೋಧಿಸಿ ‘ಮುಧೋಳ ಚಲೋ’ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಜಗದೀಶ ಕಾರಂತ ಮತ್ತು ಸ್ಥಳೀಯ ಕಾರ್ಯಕರ್ತನ ವಿರುದ್ಧ ಮುಧೋಳ ಠಾಣೆಯಲ್ಲಿ ದಾಖಲಾದ ಪ್ರಕರಣ

2011: ದೊಡ್ಡಬಳ್ಳಾಪುರದಲ್ಲಿ ‘ಲವ್ ಜಿಹಾದ್’ ವಿರುದ್ಧದ ಪ್ರತಿಭಟನೆ ವೇಳೆ ಪೊಲೀಸರನ್ನು ನಿಂದಿಸಿದಕ್ಕೆ ಜಗದೀಶ ಕಾರಂತ ವಿರುದ್ಧ ದಾಖಲಾದ ಪ್ರಕರಣ

2009: ಶಿರಾದಲ್ಲಿ ಹಿಂದೂ ಜನ ಜಾಗೃತಿ ಸಮಾವೇಶದಲ್ಲಿ ದ್ವೇಷ ವೈಷಮ್ಯದ ಭಾಷಣ ಮಾಡಿದ ಆರೋಪದಲ್ಲಿ 2009ರಲ್ಲಿ ಜಗದೀಶ ಕಾರಂತ ವಿರುದ್ಧ ದಾಖಲಾದ ಪ್ರಕರಣ

ಇಂತಹ ಪ್ರಕರಣ ಹಿಂಪಡೆಯಬಾರದು, ಇದು ಸಮಾಜದ ಆತ್ಮಸ್ಥೈರ್ಯವನ್ನು ಕೆಡಿಸುತ್ತದೆ ಎಂದು ಪೊಲೀಸ್ ಮಹಾ ನಿರ್ದೇಶಕರು, ಅಭಿಯೋಗ ಹಾಗೂ ಸರ್ಕಾರಿ ವ್ಯಾಜ್ಯಗಳ ಇಲಾಖೆ ಮತ್ತು ಕಾನೂನು ಇಲಾಖೆ ಅಭಿಪ್ರಾಯ ನೀಡಿದ್ದರೂ ರಾಜ್ಯ ಸರ್ಕಾರ, ಸಂಘ ಪರಿವಾರದ ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರೈತರ ಪ್ರಕರಣಗಳನ್ನು ವಾಪಸ್ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದರೂ ಕಾಟಾಚಾರಕ್ಕೆ ಎಂಬಂತೆ ರೈತರ ಕೆಲವೇ ಕೆಲವು ಪ್ರಕರಣಗಳನ್ನು ಕೈಬಿಡಲಾಗಿದ್ದು, ಇನ್ನುಳಿದಂತೆ ಸಂಘ ಪರಿವಾರದ ನಾಯಕರ ಹಲವು ಕೇಸ್ ಗಳನ್ನು ಬೊಮ್ಮಾಯಿ ಸರಕಾರ ರದ್ದು ಮಾಡಿದೆ. ಇದು ಸಾರ್ವಜನಿಕರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.



Join Whatsapp