ಮಂಗಳೂರು : ಕೊರೊನಾ ಲಾಕ್ ಡೌನ್ ಸಂದರ್ಭ ಜನತೆಯನ್ನು ಮನೋರಂಜಿಸುವ ಉದ್ದೇಶದಿಂದ ನಗರದ ಖಾಸಗಿ ವಾಹಿನಿಯೊಂದರಲ್ಲಿ ಆರಂಭಿಸಲ್ಪಟ್ಟಿದ್ದ ಕಾರ್ಯಕ್ರಮವೊಂದು ಈಗ ವಿವಾದವಾಗಿ ಬಿಜೆಪಿ ಬೆಂಬಲಿತರ ಕೆಂಗಣ್ಣಿಗೆ ಗುರಿಯಾಗಿದೆ.
ಟಿವಿ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳನ್ನು ವಿಡಂಬನೆ ಮಾಡಿದ್ದಾರೆಂದು ಆಪಾದಿಸಿ, ತುಳುರಂಗ ಭೂಮಿ ಹಾಗೂ ಸಿನೆಮಾದ ಜನಪ್ರಿಯ ಹಿರಿಯ ಕಲಾವಿದ ಅರವಿಂದ ಬೋಳಾರ್ ಮತ್ತು ಚಾನೆಲ್ ವಿರುದ್ಧ ಮಂಗಳೂರಿನ ಕಾವೂರು ಠಾಣೆಯಲ್ಲಿ ಕೇಸು ದಾಖಲಾಗಿದೆ. ಆದರೆ, ಹಾಸ್ಯಕ್ಕಾಗಿ ಮಾಡಿದ ಈ ಕಾರ್ಯವನ್ನು ಹಾಸ್ಯವಾಗಿ ತೆಗೆದುಕೊಳ್ಳದೆ, ದುರುದ್ದೇಶಕ್ಕೆ ಬಳಸಿಕೊಂಡದ್ದನ್ನು ತುಳುನಾಡಿನಾದ್ಯಂತ ಅರವಿಂದ ಬೋಳಾರ್ ಅಭಿಮಾನಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಅಲ್ಲದೆ, ಅರವಿಂದ ಬೋಳಾರ್ ಮತ್ತು ಖಾಸಗಿ ಚಾನೆಲ್ ದಾಯ್ಜಿವರ್ಲ್ಡ್ ಪರವಾಗಿ ನಿಂತಿದ್ದಾರೆ.
ತುಳುನಾಡಿನಲ್ಲಿ ಮನೆಮಾತಾಗಿರುವ ದಾಯ್ಜಿವರ್ಲ್ಡ್ ಚಾನೆಲ್ ನಲ್ಲಿ “ಪ್ರೈವೆಟ್ ಚಾಲೆಂಜ್’’ ಎಂಬ ವಿಡಂಬನಾತ್ಮಕ ಕಾರ್ಯಕ್ರಮ ನಿರಂತರವಾಗಿ ಪ್ರಸಾರವಾಗುತಿತ್ತು. ಈ ಕಾರ್ಯಕ್ರಮದಲ್ಲಿ ಪುರೋಹಿತರು ಮತ್ತು ಜ್ಯೋತಿಷಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಚಾನೆಲ್ ನಿರೂಪಕ ವಾಲ್ಟರ್ ನಂದಳಿಕೆ ಮತ್ತು ಕಲಾವಿದ ಅರವಿಂದ ಬೋಳಾರ್ ವಿರುದ್ಧ ಶಿವರಾಜ್ ಎಂಬವರು ದೂರು ನೀಡಿದ್ದಾರೆ.
ಆ.9ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ “ಬರೆದೀಪಿ ಜ್ಯೋತಿಷಿ (ಬರೆದಿಡುವ ಜ್ಯೋತಿಷಿ)’’ ಎಂಬ ಪಾತ್ರದಲ್ಲಿ ಕಲಾವಿದ ಅರವಿಂದ ಬೋಳಾರ್ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಹಾಸ್ಯದ ಉದ್ದೇಶದಿಂದ ವಿಡಂಬನೆ ಮಾಡಿದ್ದರು. ಜ್ಯೋತಿಷ್ಯರು ಸ್ತ್ರೀ ವಶೀಕರಣ, ಭವಿಷ್ಯ ನುಡಿಯುವುದರ ಬಗ್ಗೆ ನಗೆಚಟಾಕಿಗಳನ್ನು ಹಾರಿಸಿದ್ದರು. ಇದಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂಬ ತಕರಾರು ಎದ್ದಿದೆ. ಅರವಿಂದ ಬೋಳಾರ್ ಅವರು ಈ ಹಿಂದೆ ಸಿನೆಮಾಗಳಲ್ಲೂ ಜ್ಯೋತಿಷಿಯ ಪಾತ್ರ ನಿರ್ವಹಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ಚಾಲಿಪೋಲಿಲು ಸಿನೆಮಾದ ಅವರ ಜ್ಯೋತಿಷಿಯ ಪಾತ್ರ ತುಳುನಾಡಿನ ಯಾವ ಸಿನೆಮಾ ಪ್ರೇಕ್ಷಕನೂ ಮರೆಯಲು ಸಾಧ್ಯವಿಲ್ಲ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೆಂಬಲವನ್ನು ಅರವಿಂದ ಬೋಳಾರ್ ಗೆ ಸೂಚಿಸಿದ್ದಾರೆ. ಬಿಜೆಪಿಗೆ ಸೇರಿದ ರಾಜಕಾರಣಿಯೊಬ್ಬರ ಬಗ್ಗೆ ಅರವಿಂದ ಬೋಳಾರ್ ಪರೋಕ್ಷವಾಗಿ ವಿಡಂಬನೆ ಮಾಡಿದ್ದುದು, ಈ ಹಿಂದೆ ವೈರಲ್ ಆಗಿದ್ದು, ಅದಕ್ಕೆ ಪ್ರತೀಕಾರವನ್ನು ಈ ರೀತಿ ತೀರಿಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಬಹುತೇಕ ಮಂದಿ ಕಲಾವಿದ ಬೋಳಾರ್ ಪರ ನಿಲ್ಲುವುದಾಗಿ ತಮ್ಮ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಬರೆದುಕೊಂಡಿದ್ದಾರೆ.
ಈ ನಡುವೆ, ಚಾನೆಲ್ ನಿರೂಪಕ ವಾಲ್ಟರ್ ನಂದಳಿಕೆ ಮತ್ತು ಕಲಾವಿದ ಅರವಿಂದ ಬೋಳಾರ್ ಚಾನೆಲ್ ನಲ್ಲಿ ಬಂದು ಕಾರ್ಯಕ್ರಮದಲ್ಲಿ ನಾವು ಯಾವುದೇ ತಪ್ಪುಗಳನ್ನು ಆಡಿಲ್ಲ. ಅದರಾಚೆಗೂ ಕೆಲವರು ಹಾಕುತ್ತಿರುವ ಅಶ್ಲೀಲ ಕಾಮೆಂಟ್ ಗಳು ನಮಗೆ ತೀರಾ ಬೇಜಾರು ಉಂಟು ಮಾಡಿದೆ. ನಾವು ಏನೂ ತಪ್ಪಿ ಮಾತನಾಡಿಲ್ಲ. ಆದರೂ ನಮ್ಮ ಮಾತಿನಿಂದ ನಿಮಗೆ ಬೇಜಾರಾಗಿದ್ದರೆ, ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.