ಜೈಲಿನಿಂದ ಪತಿಯನ್ನು ಬಿಡುಗಡೆಗೊಳಿಸಲು ಡ್ರಗ್ಸ್ ದಂಧೆಗಿಳಿದ ಪತ್ನಿ ಪೊಲೀಸರ ಬಲೆಗೆ

Prasthutha|

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಪತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ವಕೀಲರಿಗೆ ಹಣ ಕೊಡಲು  ತಾನೂ ಕೂಡ ಡ್ರಗ್ಸ್ ದಂಧೆಗಿಳಿದಿದ್ದ ವಿದೇಶಿ ಮಹಿಳೆಯೊಬ್ಬಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಮಹದೇವಪುರದ ತಾಂಜೇನಿಯಾ ಮೂಲದ ಫಾತಿಮಾ ಒಮೇರಿ ಬಂಧಿತಳಾಗಿದ್ದು, ಆಕೆಯಿಂದ 1.5 ಲಕ್ಷ ಮೌಲ್ಯದ 13 ಗ್ರಾಂ ಎಂಡಿ ಕ್ರಿಸ್ಟೆಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಮ್ಮನಹಳ್ಳಿ ರಸ್ತೆ ಜಲವಾಯು ವಿಹಾರದ ಸಮೀಪದ  ಆರೋಪಿಯು ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಕಾರ್ಯಾಚರಣೆ ಕೈಗೊಂಡು  ಬಂಧಿಸಲಾಗಿದೆ ಎಂದು ಡಿಸಿಪಿ ಡಾ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

- Advertisement -

ಆರೋಪಿ ಫಾತಿಮಾ ಮೂಲತಃ ತಾಂಜೇನಿಯಾ ದೇಶದವಳಾಗಿದ್ದು, 2018ರಲ್ಲಿ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದು  ಮಹದೇವಪುರದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಸುಲಭವಾಗಿ ಹಣ ಸಂಪಾದನೆಗೆ ಫಾತಿಮಾ ದಂಪತಿ ಡ್ರಗ್ಸ್ ದಂಧೆಗಿಳಿದಿದ್ದರು. ಕೆಲ ತಿಂಗಳ ಹಿಂದೆ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಆಕೆಯ ಪತಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪತಿಗೆ ಜಾಮೀನು ಕೊಡಿಸಲು ಓಡಾಡುತ್ತಿದ್ದ ಫಾತಿಮಾ, ಇದಕ್ಕೆ ಅಗತ್ಯವಾದ ಖರ್ಚು ವೆಚ್ಚಗಳಿಗೆ ತಾನು ಸಹ ಡ್ರಗ್ಸ್ ದಂಧೆ ಶುರು ಮಾಡಿ ಸಿಕ್ಕಿಬಿದ್ದಿದ್ದಾಳೆ ಎಂದರು.

Join Whatsapp