ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯಿಂದ ರಾಷ್ಟ್ರಧ್ವಜಕ್ಕೆ ಅವಮಾನ

Prasthutha|

ಶ್ರೀನಗರ : ಜಮ್ಮು-ಕಾಶ್ಮೀರ ಪ್ರವೇಶ ದಿನದ ಪ್ರಯುಕ್ತ ಬಿಜೆಪಿ ಸೋಮವಾರ ಶ್ರೀನಗರದಲ್ಲಿ ಆಯೋಜಿಸಿದ್ದ ‘ತಿರಂಗಾ ಯಾತ್ರೆ (ತ್ರಿವರ್ಣ ಧ್ವಜ ರ್ಯಾಲಿ)’ಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಘಟನೆ ನಡೆದಿದೆ. ಇತ್ತೀಚೆಗೆ ಪಿಡಿಪಿ ನಾಯಕಿ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ತ್ರಿವರ್ಣ ಧ್ವಜ ಕುರಿತ ವಿವಾದಾತ್ಮಕ ಹೇಳಿಕೆಗೆ ಸೆಡ್ಡು ಹೊಡೆಯಲು ಅತ್ಯುತ್ಸಾಹದಿಂದ ತ್ರಿವರ್ಣ ಧ್ವಜ ವಾಹನ ಜಾಥಾ ನಡೆಸಿದ ಬಿಜೆಪಿಗರ ವಾಹನವೊಂದರಲ್ಲಿ ಧ್ವಜವನ್ನು ಉಲ್ಟಾ ಪ್ರದರ್ಶಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

- Advertisement -

1947, ಅ.6ರಂದು ಆಗಿನ ಜಮ್ಮು-ಕಾಶ್ಮೀರ ರಾಜಮನೆತನವು ತಮ್ಮ ರಾಜಾಡಳಿತ ರಾಜ್ಯವನ್ನು ಭಾರತ ಒಕ್ಕೂಟಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಸಹಿ ಮಾಡಿದ್ದ ದಿನ. ಆ ದಿನವನ್ನು ಪ್ರವೇಶ ದಿನವೆಂದು ಆಚರಿಸಲಾಗುತ್ತಿದ್ದು, ಸರಕಾರಿ ರಜೆಯೂ ಇರುತ್ತದೆ.

ಈ ಸಂಭ್ರಮದಲ್ಲಿ ಪಾಲ್ಗೊಂಡ ಬಿಜೆಪಿ ಕಾರ್ಯಕರ್ತರ ವಾಹನವೊಂದರಲ್ಲಿ ತ್ರಿವರ್ಣ ಧ್ವಜ ಉಲ್ಟಾ ಆಗಿ ಪ್ರದರ್ಶಿಸಲ್ಪಟ್ಟಿದ್ದುದು, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಯಿತು. “ಒಂದು ಕಾರಿನಲ್ಲಿ ಧ್ವಜ ಮೇಲೆ ಕೆಳಗಾಗಿದೆ, ನಿಮ್ಮ ಕಾರ್ಯಕರ್ತರು ಅಥವಾ ಡಿಜಿಟಲ್ ತಂಡಕ್ಕೆ ಈ ಬಗ್ಗೆ ಗೊತ್ತಿಲ್ಲ ಎಂದೆನಿಸುತ್ತದೆ’’ ಎಂದು ಮೊಹಮ್ಮದ್ ಜುಬೇರ್ ಎಂಬವರು ಫೋಟೊ ಸಹಿತ ಟ್ವೀಟ್ ಮಾಡಿದ್ದಾರೆ.
ತಾವೇ ದೊಡ್ಡ ದೇಶಪ್ರೇಮಿಗಳು ಎಂದು ಹೇಳಿಕೊಳ್ಳುವ ಬಿಜೆಪಿಗರಿಗೆ ರಾಷ್ಟ್ರಧ್ವಜ ಯಾವ ರೀತಿ ಹಾರಿಸಬೇಕು ಎಂಬುದು ತಿಳಿಯದಿರುವುದೂ ವಿಪರ್ಯಾಸ.

- Advertisement -

ಬಿಜೆಪಿ ಮೆರವಣಿಗೆ ಗುಪ್ಕಾರ್ ರಸ್ತೆಯಲ್ಲಿ ಸಾಗಿತ್ತು. ಮೆರವಣಿಗೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಕ್ ಅಬ್ದುಲ್ಲಾ ಮನೆ ಮುಂದೆ ಘೋಷಣೆಗಳನ್ನು ಕೂಗಿದ್ದಾರೆ.

ಮೆಹಬೂಬಾ ಮುಫ್ತಿ ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, ಜಮ್ಮು-ಕಾಶ್ಮೀರದ ಧ್ವಜ ಪ್ರದರ್ಶಿಸಿ, ಈ ಧ್ವಜ ಮರಳಿದರೆ ಮಾತ್ರ ತ್ರಿವರ್ಣ ಧ್ವಜ ಹಾರಿಸುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಿಜೆಪಿ ಇದನ್ನು ದೇಶದ್ರೋಹ ಹೇಳಿಕೆ ಎಂದು ಬಣ್ಣಿಸಿತ್ತು.



Join Whatsapp