ವಾಶಿಂಗ್ಟನ್ : ಅರಬ್ ದೇಶಗಳಲ್ಲಿ ಸುಧಾರಣೆಗಳನ್ನು ತರಬೇಕೆಂದು ಒತ್ತಾಯಿಸುತ್ತಿದ್ದ ಮತ್ತು ಅಲ್ಲಿನ ಸರಕಾರಗಳನ್ನು ಟೀಕಿಸುತ್ತಿದ್ದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಸಂಬಂಧಿಸಿ, ಅವರ ಸಂಬಂಧಿಕರು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಕೊಲೆ ದೂರು ದಾಖಲಿಸಿದ್ದಾರೆ.
ಸರಕಾರದ ವಿರುದ್ಧ ಟೀಕಾಕಾರರನ್ನು ಮೌನ ವಹಿಸುವಂತೆ ಮಾಡಲು ರಾಜಕುಮಾರ ಸಲ್ಮಾನ್ ನಿರ್ದೇಶನದಲ್ಲಿ ಈ ಹತ್ಯೆ ನಡೆದಿದೆ ಆರೋಪಿಸಲಾಗಿದೆ. ಜಮಾಲ್ ರ ಪ್ರೇಯಸಿ ಹ್ಯಾಟಿಸ್ ಸೆಂಜಿಝ್ ಮತ್ತು ಮಾನವ ಹಕ್ಕುಗಳ ಸಂಘಟನೆ ಡೆಮಾಕ್ರಸಿ ಫಾರ್ ದ ಅರಬ್ ವರ್ಲ್ಡ್ ನೌ ವಿಷಯಕ್ಕೆ ಸಂಬಂಧಿಸಿ ವಾಶಿಂಗ್ಟನ್ ಡಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಪ್ರಕರಣದಲ್ಲಿ ರಾಜಕುಮಾರ ಮುಹಮ್ಮದ್ ಮತ್ತು ಇತರ ಸೌದಿ ಗೃಹ ಸಚಿವಾಲಯದ ಅಧಿಕಾರಿಗಳನ್ನು ಆರೋಪಿಗಳಾಗಿ ಗುರುತಿಸಲಾಗಿದೆ.
ಜಮಾಲ್ ಅಮೆರಿಕದಲ್ಲಿದ್ದುಕೊಂಡು, ಅರಬ್ ರಾಷ್ಟ್ರಗಳಲ್ಲಿ ಪ್ರಜಾಸತ್ತಾತ್ಮಕ ಸುಧಾರಣೆಗಳಾಗಬೇಕೆಂದು ಪ್ರತಿಪಾದಿಸುತ್ತಿದ್ದರು. ‘ದ ವಾಶಿಂಗ್ಟನ್ ಪೋಸ್ಟ್’ ನಲ್ಲಿ ಅವರು ಈ ಕುರಿತು ಲೇಖನಗಳನ್ನು ಬರೆಯುತ್ತಿದ್ದರು. 2018, ಅಕ್ಟೋಬರ್ ನಲ್ಲಿ ಅವರ ಹತ್ಯೆ ನಡೆದಿತ್ತು. ಅವರ ಮೃತದೇಹ ಇಂದಿನ ವರೆಗೂ ಪತ್ತೆಯಾಗಿಲ್ಲ.