ನವದೆಹಲಿ: 2021ರ ಜನವರಿಯಿಂದಲೇ ಪೌರತ್ವ(ತಿದ್ದುಪಡಿ) ಕಾಯ್ದೆ(ಸಿಎಎ) ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.
ಸಿಎಎ ಜಾರಿಗೆ ಬಂದರೆ ನೆರೆಯ ದೇಶದಿಂದ ಭಾರತಕ್ಕೆ ಆಗಮಿಸಿರುವ ಸಿಖ್ಖರು, ಜೈನರು, ಬೌದ್ಧರು, ಕ್ರೈಸ್ತರು ಮತ್ತು ಪಾರ್ಸಿಗಳಿಗೆ 2014ರ ಡಿಸೆಂಬರ್ 31ರೊಳಗೆ ಪೌರತ್ವ ನೀಡಲಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಭಾರತಕ್ಕೆ ಬಂದ ನಿರಾಶ್ರಿತರಿಗೆ ಪೌರತ್ವ ನೀಡಲು ಉತ್ಸುಕವಾಗಿದೆ. ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪಶ್ಚಿಮಬಂಗಾಳದಲ್ಲಿ ಬಹು ಸಂಖ್ಯೆಯಲ್ಲಿರುವ ನಿರಾಶ್ರಿತರಿಗೆ ಪೌರತ್ವ ನೀಡಲು ಮುಂದಾಗಿದೆ.
“ಸಿಎಎ ಅಡಿಯಲ್ಲಿ ಪಶ್ಚಿಮಬಂಗಾಳದಲ್ಲಿ ದೊಡ್ಡಸಂಖ್ಯೆಯಲ್ಲಿರುವ ನಿರಾಶ್ರಿತರಿಗೆ ಜನವರಿಯಿಂದಲೇ ಪೌರತ್ವ ದೊರೆಯಲಿದೆ” ಎಂದು ವಿಜಯವರ್ಗೀಯ ಹೇಳಿದ್ದಾರೆ.
“ಬಿಜೆಪಿ ಪಶ್ಚಿಮಬಂಗಾಳದ ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದೆ” ಎಂದು ಟಿಎಂಸಿಯ ಹಿರಿಯ ಮುಖಂಡ ಫಿರ್ಹಾದ್ ಹಕೀಮ್ ಆರೋಪಿಸಿದರು.