ಚುನಾವಣೆಯಲ್ಲಿ ಸೋತರೆ ಬಿಜೆಪಿ ಕಾರ್ಯಕರ್ತರು ಟ್ರಂಪ್ ಬೆಂಬಲಿಗರಂತೆ ವರ್ತಿಸಲಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. “ಚುನಾವಣೆಯಲ್ಲಿ ಸೋತ ದಿನದಂದು ಬಿಜೆಪಿ ಸದಸ್ಯರು ಮತ್ತು ಕಾರ್ಯಕರ್ತರು ಟ್ರಂಪ್ ಬೆಂಬಲಿಗರಂತೆ ವರ್ತಿಸಲಿದ್ದಾರೆ” ಎಂದು ಅವರು ನಾದಿಯಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ತನ್ನ ಪಕ್ಷದಿಂದ ಇತ್ತೀಚೆಗೆ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿರುವುದನ್ನು ಉಲ್ಲೇಖಿಸಿ, ಬಿಜೆಪಿ ಒಂದು ಕಸದ ಬುಟ್ಟಿಯಂತಿರುವ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ. “ಅವರು ಇತರ ಪಕ್ಷಗಳ ಭ್ರಷ್ಟಾಚಾರದಿಂದ ಕೊಳೆತವರನ್ನು ತಂದು ಬಿಜೆಪಿಯಲ್ಲಿ ತುಂಬುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಕೆಲವು ತೃಣಮೂಲ ನಾಯಕರು ಬಿಜೆಪಿಗೆ ಹೋಗುವುದನ್ನು ನಾವು ನೋಡಿದ್ದೇವೆ. ಅವರು ಲೂಟಿ ಮಾಡಿದ ಸಾರ್ವಜನಿಕರ ಹಣವನ್ನು ಉಳಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಬಿಜೆಪಿ ವಾಷಿಂಗ್ ಮೆಷಿನ್ ನಂತೆ ವರ್ತಿಸುತ್ತಿದೆ. ಅವರ ಪಕ್ಷಕ್ಕೆ ಸೇರುವ ಮೂಲಕ ಭ್ರಷ್ಟರು ಸಂತರಾಗುತ್ತಾರೆ.” ಎಂದು ಮಮತಾ ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದಾರೆ.
ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವನ್ನು ಘೋಷಿಸಿದ ಮಮತಾ, ರೈತ ವಿರೋಧಿ ಕಾನೂನುಗಳನ್ನು ಆದಷ್ಟು ಬೇಗ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.