ಮಂಗಳೂರು: ಜಿಲ್ಲೆಯಲ್ಲಿ ನಡೆದ ಕೋಮುದ್ವೇಷದ ಹತ್ಯೆ ಮತ್ತು ಬಳಿಕ ರಾಜ್ಯ ಸರ್ಕಾರ ನಡೆದುಕೊಂಡ ನಡೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮ್ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಜಿಲ್ಲೆಯಲ್ಲಿ ಹತ್ಯೆಗೊಳಗಾದ ಬೆಳ್ಳಾರೆಯ ಮಸೂದ್, ಪ್ರವೀಣ್ ನೆಟ್ಟಾರು ಹಾಗೂ ಮಂಗಳಪೇಟೆಯ ಮುಹಮ್ಮದ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ತನ್ನ ತಾರತಮ್ಯ ನೀತಿಯನ್ನು ಕೈ ಬಿಟ್ಟು ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಮುಸ್ಲಿಮ್ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್, ಮುಸ್ಲಿಮ್ ಸಮುದಾಯದ ಇಬ್ಬರ ಯುವಕರ ಜೀವ ಹೋದರೂ ಶಾಂತಿಯುತವಾಗಿ ಅವರ ಅಂತ್ಯಕ್ರಿಯೆ ನಡೆಸಲು ಮುಸ್ಲಿಮರು ಸಹಕರಿಸಿದ್ದಾರೆ. ಎಲ್ಲೂ ಅಹಿತಕರ ಘಟನೆಗಳಿಗೆ ಅವಕಾಶ ಕೊಟ್ಟಿಲ್ಲ. ಆದರೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ‘ಕ್ರಿಯೆಗೆ ಪ್ರತಿಕ್ರಿಯೆ’ಎಂದು ಸಾರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರಂಭದಲ್ಲೇ ಎಡವಿದರು. ಹತ್ಯೆಯಾದ ಪ್ರವೀಣ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರಕಾರದಿಂದ 25 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಮೀಪದಲ್ಲೇ ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳಿಂದ ಕೊಲೆಯಾದ ಮಸೂದ್ ಮನೆಗೆ ಭೇಟಿ ನೀಡದೆ, ಪರಿಹಾರದ ಚೆಕ್ ಕೂಡ ವಿತರಿಸದೆ ತಾರತಮ್ಯ ಮಾಡಿದರು. ಬೆಂಗಳೂರಿಗೆ ಹಿಂದಿರುಗಿ ಹೋಗುವಾಗ ಶಾಂತಿ ಸಭೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಮುಖ್ಯಮಂತ್ರಿ ಮೃತ ಮಸೂದ್ ಮನೆಗೆ ಹೋಗಿದ್ದರೆ ಶಾಂತಿ ಸಭೆಯ ಅಗತ್ಯವೇ ಇರಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕಿದ್ದ ಮುಖ್ಯಮಂತ್ರಿಯ ತಾರತಮ್ಯ ನೀತಿಯನ್ನು ಖಂಡಿಸಿ ಮುಸ್ಲಿಂ ಸಂಘಟನೆಗಳು ಜಿಲ್ಲಾಡಳಿತ ಕರೆದಿದ್ದ ಶಾಂತಿ ಸಭೆಯನ್ನು ಬಹಿಷ್ಕರಿಸುವುದು ಅನಿವಾರ್ಯವಾಯಿತು ಎಂದು ಹೇಳಿದರು.
ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಮಾತನಾಡಿ, ಮುಖ್ಯಮಂತ್ರಿಯ ತಾರತಮ್ಯ ನೀತಿಯನ್ನು ಸಹಿಸಲು ಸಾಧ್ಯವಿಲ್ಲ. ಈ ಸರಣಿ ಕೊಲೆಗಳ ಹಿಂದೆ ದುಷ್ಟಶಕ್ತಿಗಳ ಕೈವಾಡವಿದೆ. ಹಾಗಾಗಿ ಮೂರೂ ಕೊಲೆ ಪ್ರಕರಣವನ್ನು ಎನ್ ಐಎ ತನಿಖಾ ಸಂಸ್ಥೆಗೆ ಒಪ್ಪಿಸಬೇಕು. ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸದೆ ನೈಜ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಹೇಳಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಮುಮ್ತಾಝ್ ಅಲಿ ಮಾತನಾಡಿ, ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಗಳಿಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ಧನ ಘೋಷಿಸಿ ಬಳಿಕ ಮಾತು ತಪ್ಪಿದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಣಿ ಹತ್ಯೆಯ ಪೈಕಿ ಪ್ರವೀಣ್ ಕುಟುಂಬಕ್ಕೆ ಮಾತ್ರ ಪರಿಹಾರ ಧನ ಘೋಷಿಸಿ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಅನ್ಯಾಯ ಎಸಗಿರುವುದು ಖಂಡನೀಯವಾಗಿದೆ ಎಂದು ತಿಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಮುಖಂಡ ಮುಹಮ್ಮದ್ ಕುಂಞಿ, ಎಸ್ಸೆಸ್ಸೆಫ್ ನಾಯಕ ಯಾಕೂಬ್ ಸಅದಿ ನಾವೂರು, ಮುಸ್ಲಿಂ ಲೀಗ್ ನಾಯಕ ತಬೂಕ್ ದಾರಿಮಿ, ಎಸ್ಕೆಎಸ್ ಎಂ ನಾಯಕ ಬಶೀರ್ ಶಾಲಿಮಾರ್, ಎಸ್ ವೈಎಸ್ ನಾಯಕ ಅಶ್ರಫ್ ಕಿನಾರ, ಕರ್ನಾಟಕ ಮುಸ್ಲಿಂ ಜಮಾಅತ್ ನ ನಾಸಿರ್ ಲಕ್ಕಿಸ್ಟಾರ್, ಎಸ್ ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್, ಪಿಎಫ್ ಐ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಅಡ್ವಕೇಟ್ ಸರ್ಫ್ರಾಝ್, ಮಂಗಳಪೇಟೆ ಮಸೀದಿಯ ಅಧ್ಯಕ್ಷ ಹಸನಬ್ಬ ಮಂಗಳಪೇಟೆ, ಮುಸ್ಲಿಂ ಐಕ್ಯತಾ ವೇದಿಕೆಯ ಅಶ್ರಫ್ ಬದ್ರಿಯಾ, ಯಾಸೀನ್ ಕುದ್ರೋಳಿ, ಸುಳ್ಯ ಮಸೀದಿಯ ಅಧ್ಯಕ್ಷ ಮುಸ್ತಫಾ ಸುಳ್ಯ, ಮಾಜಿ ಕಾರ್ಪೊರೇಟರ್ ಅಬೂಬಕರ್ ಕುದ್ರೋಳಿ, ಹಾರಿಸ್ ಬೈಕಂಪಾಡಿ, ಜಲೀಲ್ ಕೃಷ್ಣಾಪುರ, ಅದ್ದು ಕೃಷ್ಣಾಪುರ, ಸುಳ್ಯ ಸಂಯುಕ್ತ ಜಮಾಅತ್ ನ ಇಬ್ರಾಹೀಂ ಹಾಜಿ ಸುಳ್ಯ, ಇಕ್ಬಾಲ್ ಸುಳ್ಯ, ಕೆ.ಎಸ್. ಉಮರ್ ಉಪಸ್ಥಿತರಿದ್ದರು.