ಬೆಂಗಳೂರು: ಕೋವಿಡ್ ನಿರ್ವಹಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರವು ನಾಲ್ಕು ತಿಂಗಳಲ್ಲಿ ರೂ.4,167 ಕೋಟಿ ಖರ್ಚು ಮಾಡಿದ್ದು, ಇದರಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಈ ಅವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೋವಿಡ್ ನಿಯಂತ್ರಣ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯ ವೇಳೆ ಸಚಿವರು ಮತ್ತು ಅಧಿಕಾರಿಗಳು ರೂ.2 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯವರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವೆಂಟಿಲೇಟರ್, ಮಾಸ್‌ಕ, ಸ್ಯಾನಿಟೈಸರ್ ಇವುಗಳನ್ನು ಖರೀದಿಸಿ ಅಕ್ರಮ ಎಸಗಲಾಗಿದೆ. ಈ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುತ್ತಾ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು. ಕೇಂದ್ರ ಸರ್ಕಾರ 50 ಸಾವಿರ ವೆಂಟಿಲೇಟ್‌ಗಳನ್ನು ರೂ.2 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿಸಿದೆ. ಅಂದರೆ ಪ್ರತೀ ವೆಂಟಿಲೇಟರ್‌ನ ಮೊತ್ತ ರೂ.4 ಲಕ್ಷವಾಗಿದೆ. ತಮಿಳುನಾಡು ಸರ್ಕಾರವೂ ಪ್ರತಿ ವೆಂಟಿಲೇಟರ್ ಅನ್ನು ರೂ.4.78 ಲಕ್ಷಕ್ಕೆ ಖರೀದಿಸಿದೆ. ರಾಜ್ಯ ಸರ್ಕಾರ ಮಾತ್ರ ಮಾರ್ಚ್ 22ರಂದು ರೂ. 5.70 ಲಕ್ಷಕ್ಕೆ, ಮತ್ತೊಂದು ಬಾರಿ ರೂ.12.30 ಲಕ್ಷಕ್ಕೆ ಹಾಗೂ ಏಪ್ರಿಲ್ 23ರಂದು ರೂ.18.20 ಲಕ್ಷಕ್ಕೆ ಖರೀದಿಸಿದೆ. ಬೆಲೆಯಲ್ಲಿ ಇಷ್ಟೊಂದು ವ್ಯತ್ಯಾಸ ಕಂಡು ಬರುತ್ತಿರುವಾಗ ಭ್ರಷ್ಟಾಚಾರ ನಡೆದಿಲ್ಲ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮಾರುಕಟ್ಟೆಯಲ್ಲಿ ಮಾಸ್‌ಕಗಳ ಬೆಲೆ ರೂ.50ರಿಂದ ರೂ.60 ಇದೆ. ಆದರೆ ಇವರು 2 ಪಟ್ಟು ಅಂದರೆ ರೂ.120 ಕೊಟ್ಟು 10 ಲಕ್ಷ ಮಾಸ್‌ಕಗಳನ್ನು ಖರೀದಿಸಿದ್ದಾರೆ. ಹಾಗೆಯೇ ಮಾರುಕಟ್ಟೆಯಲ್ಲಿ ಪಿಪಿಇ ಕಿಟ್‌ಗಳ ಬೆಲೆ ರೂ.330 ಇದೆ. ಆದರೆ ಒಂದೊಂದು ಪಿಪಿಇ ಕಿಟ್‌ಗಳಿಗೆ ರೂ. 2,112 ನೀಡಿ ಖರೀದಿಸಿದ್ದಾರೆ. ಇದೆಲ್ಲಾ ಭ್ರಷ್ಟಾಚಾರವಲ್ಲದೆ ಮತ್ತೇನು? ಮೇಕ್ ಇನ್ ಇಂಡಿಯಾ ಭಾಷಣ ಮಾಡುವ ಬಿಜೆಪಿ ಸರ್ಕಾರ ಚೀನಾದಿಂದಲೇ ಈ ಪಿಪಿಇ ಕಿಟ್‌ಗಳನ್ನು ಖರೀದಿಸಿದ್ದು, ಇದು ಅವರ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದೆ.
ಕೋವಿಡ್ ಖರ್ಚಿನ ಬಗ್ಗೆ ಮಾಹಿತಿ ನೀಡುವಂತೆ ಇದುವರೆಗೂ 20 ಪತ್ರಗಳನ್ನು ಸರ್ಕಾರಕ್ಕೆ ಬರೆದಿದ್ದೇನೆ. ಯಾವುದಕ್ಕೂ ಉತ್ತರವಿಲ್ಲ. ಜು. 20ರಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಸುದ್ದಿಗೋಷ್ಠಿ ನಡೆಸಿ, ಸಿದ್ದರಾಮಯ್ಯನವರು 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರ ಎಂದು ಹೇಳಿದ್ದಾರೆ. ಹಾಗಾದರೆ ನಾನು ಬರೆದ ಪತ್ರಕ್ಕೆ ಇದುವರೆಗೂ ಉತ್ತರ ಏಕೆ ಕೊಟ್ಟಿಲ್ಲ. ಇವರು ಪ್ರಾಮಾಣಿಕರಾಗಿದ್ದರೆ ಲೆಕ್ಕ ಕೊಡಲು ತೊಂದರೆ ಏನು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಇಂತಹ ಭ್ರಷ್ಟ ಸರ್ಕಾರ ಇದುವರೆಗೂ ಬಂದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಸಲೀಂ ಮುಹಮ್ಮದ್, ಮಾಜಿ ಸಚಿವ ರಮೇಶ್ ಕುಮಾರ್, ವಕ್ತಾರ ಉಗ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.