ಕೊರೊನಾ ನೆಪ | ಪಠ್ಯ ಪುಸ್ತಕದಲ್ಲಿ ಟಿಪ್ಪು ಅಧ್ಯಾಯಕ್ಕೆ ಕತ್ತರಿ

Prasthutha|

ಬೆಂಗಳೂರು : ಕೊರೊನಾ ಸಂಕಷ್ಟದ ನೆಪವನ್ನಿಟ್ಟುಕೊಂಡು ಕರ್ನಾಟಕ ಸರಕಾರ ಏಳನೇ ತರಗತಿ ಪಠ್ಯದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಮತ್ತು ಆತನ ತಂದೆ ಹೈದರ್ ಆಲಿ ಕುರಿತ ಅಧ್ಯಾಯಕ್ಕೆ ಕತ್ತರಿ ಹಾಕಿರುವ ವಿಷಯ ವರದಿಯಾಗಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆಯಿದ್ದು, ಈ ವರ್ಷದ ಶೈಕ್ಷಣಿಕ ಅವಧಿಯನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಪಠ್ಯ ಕ್ರಮದಲ್ಲೂ ಶೇ.30ರಷ್ಟು ಕಡಿತ ಮಾಡುವ ಬಗ್ಗೆ ಸರ್ಕಾರ ತಿಳಿಸಿತ್ತು. 6ರಿಂದ 10ನೇ ತರಗತಿ ವರೆಗಿನ ಪಠ್ಯ ಪುಸ್ತಕಗಳಿಂದ ಇತರ ಹಲವು ಅಧ್ಯಾಯಗಳನ್ನೂ ಕಡಿತಗೊಳಿಸಲಾಗಿದೆ. ಮರುಕಳಿಸಿರುವ, ಪರ್ಯಾಯ ವಿಧಾನದ ಕಲಿಕೆಗೆ ಸಾಧ್ಯವಿರುವ ಅಧ್ಯಾಯಗಳನ್ನು ಕೈಬಿಡಲಾಗಿದೆ ಎನ್ನಲಾಗಿದೆ.

- Advertisement -

ಟಿಪ್ಪು ಸುಲ್ತಾನ್ ವಿಚಾರದಲ್ಲಿ ಹಿಂದಿನಿಂದಲೂ ಬಿಜೆಪಿ ವಿರೋಧಿಸಿಕೊಂಡು ಬಂದಿದೆ. ಹೀಗಾಗಿ ಈಗ ಬಿಜೆಪಿ ಸರ್ಕಾರದಲ್ಲಿ ಈಗ ಪಠ್ಯಕ್ರಮದಿಂದ ಟಿಪ್ಪು ಅಧ್ಯಾಯ ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಬಿಜೆಪಿ ಸರ್ಕಾರದ ಕ್ರಮವನ್ನು ರಾಜಕೀಯ ಪಕ್ಷಗಳು, ಪ್ರಗತಿಪರ ಸಂಘಟನೆಗಳು ಖಂಡಿಸಿವೆ. ಪಠ್ಯ ಪುಸ್ತಕದಿಂದ ಟಿಪ್ಪು ವಿಚಾರ ಮಾತ್ರವಲ್ಲ. ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ ಮುಂತಾದ ವಿಷಯಗಳನ್ನೂ ಕಡಿತ ಮಾಡಲಾಗುತ್ತಿದೆ. ಸಂವಿಧಾನ ರಚನೆಯಲ್ಲಿ ಪಾಲುದಾರರಲ್ಲದ ಬಿಜೆಪಿ ನಾಯಕರು, ಇತಿಹಾಸವನ್ನು ಕೇಸರಿಕರಣ ಮಾಡುತ್ತಿದ್ದಾರೆ ಎಂದು ಅವು ಆಕ್ರೋಶ ವ್ಯಕ್ತಪಡಿಸಿವೆ.

ಆದಾಗ್ಯೂ, ಪಠ್ಯ ಪುಸ್ತಕದ ಅಧ್ಯಾಯ ಕಡಿತ ಈ ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಎನ್ನಲಾಗಿದೆ.    



Join Whatsapp