ಮುಂಬೈ: ಬಿಜೆಪಿ ನಾಯಕ, ಮಹಾರಾಷ್ಟ್ರ ಬಂದರು ಹಾಗೂ ಮೀನುಗಾರಿಕಾ ಸಚಿವ ನಿತೇಶ್ ರಾಣೆ ಅವರು ಕೇರಳವನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದಿದ್ದಾರೆ. ಇದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೇರಳದ ವಯನಾಡ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದನ್ನು ಉಲ್ಲೇಖಿಸಿ ರಾಣೆ ಹೀಗೆ ಹೇಳಿದ್ದಾರೆ.
‘ಕೇರಳ ಮಿನಿ ಪಾಕಿಸ್ತಾನ. ಅದಕ್ಕಾಗಿಯೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಅಲ್ಲಿಂದ ಗೆಲುವು ಸಾಧಿಸಿದ್ದಾರೆ. ಎಲ್ಲಾ ಭಯೋತ್ಪಾದಕರು ಅವರಿಗೆ ಮತ ಹಾಕುತ್ತಾರೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಇವರೆಲ್ಲಾ ಭಯೋತ್ಪಾದಕರ ನೆರವಿನಿಂದ ಸಂಸದರಾಗುತ್ತಿದ್ದಾರೆ’ ಎಂದು ರಾಣೆ ಹೇಳಿದ್ದಾರೆ.
ಬಿಜೆಪಿ ನಾಯಕನ ಈ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
‘ಮುಂಬರುವ ಚುನಾವಣೆಗಳಲ್ಲಿ ಕೇರಳದಲ್ಲಿ ಪಕ್ಷ ಸ್ಪರ್ಧೆ ಮಾಡುತ್ತದೆಯೋ ಇಲ್ಲವೋ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಪ್ರಶ್ನಿಸಿ. ಇಂಥ ಅಸಂವಿಧಾನಿಕ ಹೇಳಿಕೆಗಳು ಬಿಜೆಪಿ ನಾಯಕರಿಂದ ಪದೇ ಪದೇ ಬರುತ್ತಿರುತ್ತದೆ’ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಎಕ್ಸ್ನಲ್ಲಿ ಕಿಡಿ ಕಾರಿದ್ದಾರೆ.
ಈ ಹೇಳಿಕೆ ಬಗ್ಗೆ ಗಮನಿಸಬೇಕು ಎಂದು ಎನ್ಸಿಸಿಪಿಯು (ಶರದ್ಚಂದ ಪವಾರ್) ಮುಖ್ಯಮಂತ್ರಿ ದೇವೇಂದ್ರ ಫಢಣವೀಸ್ ಅವರನ್ನು ಆಗ್ರಹಿಸಿದೆ.
ಕೇರಳ ಮಿನಿ ಪಾಕಿಸ್ತಾನ; ಹೀಗಾಗಿ ರಾಹುಲ್, ಪ್ರಿಯಾಂಕಾ ಗೆದ್ದರು: ಸಚಿವ ನಿತೇಶ್ ರಾಣೆ
Prasthutha|