ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಇನ್ನಿಬ್ಬರು ವ್ಯಕ್ತಿಗಳ ವಿರುದ್ಧ ಅಂತಾರಾಷ್ಟ್ರೀಯ ಶೂಟರ್ ವರ್ತಿಕಾ ಸಿಂಗ್ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಬಗ್ಗೆ ಫೆಬ್ರವರಿ 10 ರಂದು ಮೊಹರು ಮಾಡಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ.
ತಮ್ಮನ್ನು ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ಮಾಡಲು ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಇಬ್ಬರು ಸಹಾಯಕರಾದ ವಿಜಯ್ ಗುಪ್ತಾ ಮತ್ತು ರಜನೀಶ್ ಸಿಂಗ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದ್ದರಿಂದ ಈ ಬಗ್ಗೆ ವಿಚಾರಣೆಗೆ ಒಳಪಡಿಸುವಂತೆ ವರ್ತಿಕಾ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಾಧೀಶ ಪಿ.ಕೆ.ಜಯಂತ್ ಸಮ್ಮತಿಸಿದ್ದಾರೆ ಎಂದು ವರ್ತಿಕಾ ಸಿಂಗ್ ಅವರ ಪರ ವಕೀಲ ರೋಹಿತ್ ತ್ರಿಪಾಠಿ ಹೇಳಿದ್ದಾರೆ.
ಸಚಿವರ ಆಪ್ತರು ತಮಗೆ ನಕಲಿ ಪತ್ರವೊಂದನ್ನು ನೀಡಿದ್ದು, ಅದರಲ್ಲಿ ತಮ್ಮನ್ನು ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿರುವುದಾಗಿ ಎಂದು ವರ್ತಿಕಾ ಆರೋಪಿಸಿದ್ದರು.
ಕೇಂದ್ರ ಸಚಿವರ ಸಹಾಯಕರು ಎನ್ನಲಾದ ವಿಜಯ್ ಗುಪ್ತಾ ಮತ್ತು ರಜನೀಶ್ ಸಿಂಗ್ ಅವರು ಮೊದಲಿಗೆ 1 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ನಂತರ ಅದನ್ನು 25 ಲಕ್ಷ ರೂ.ಗೆ ಇಳಿಸಿದರು ಎಂದು ಸಿಂಗ್ ಆರೋಪಿಸಿದ್ದಾರೆ.
ಅವರಲ್ಲಿ ಓರ್ವ ತಮ್ಮೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಾನೆ ಎಂದೂ ಅವರು ದೂರಿದ್ದಾರೆ.
ಆದಾಗ್ಯೂ ವರ್ತಿಕಾ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಅಮೇಥಿ ಜಿಲ್ಲೆಯ ಮುಸಾಫಿರ್ ಖಾನ್ ಪೊಲೀಸ್ ಠಾಣೆಯಲ್ಲಿ ನವೆಂಬರ್ 23 ರಂದು ಗುಪ್ತಾ ಪ್ರತಿ ದೂರು ದಾಖಲಿಸಿದ್ದರು. ತಮ್ಮ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸಿ, ತಮ್ಮ ವರ್ಚಸ್ಸು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಎಂದು ಗುಪ್ತಾ ದೂರಿನಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಭ್ರಷ್ಟಾಚಾರ ಆರೋಪ: ವರದಿ ನೀಡುವಂತೆ ನ್ಯಾಯಾಲಯ ಆದೇಶ
Prasthutha|