ನವದೆಹಲಿ: ನೂತನ ಕೃಷಿ ಕಾನೂನುಗಳ ಬಗ್ಗೆ ರೈತರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪುನರುಚ್ಚರಿಸಿದ್ದಾರೆ.
ಬಿಜೆಪಿ ಆಯೋಜಿತ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಮಾತನಾಡಿದ ಅವರು, “ರಾಜಕೀಯ ಪ್ರೇರಿತ ಜನರು ಹೇಳಿದ್ದನ್ನು ನಾನು ಹೇಳುವುದಕ್ಕೆ ಆಗಲ್ಲ, ನಮ್ಮನ್ನು ಟೀಕಿಸುವ ರಾಜಕೀಯ ವಿಮರ್ಶಕರೊಂದಿಗೆ ಕೃಷಿ ಕಾನೂನುಗಳ ಸಂಗತಿಗಳು ಮತ್ತು ವಸ್ತುನಿಷ್ಠತೆಯ ಕುರಿತು ಮಾತನಾಡಲು ಸರ್ಕಾರ ಸಿದ್ಧವಿರುವುದನ್ನು ಭರವಸೆ ನೀಡಲು ಬಯಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೃಷಿಯಲ್ಲಿ ‘ಬ್ರಾಂಡ್ ಇಂಡಿಯಾ’ ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ಖಾಸಗಿ ಹೂಡಿಕೆಯಿಂದ ರೈತರ ಆದಾಯ ಹೆಚ್ಚಳ ಸೇರಿದಂತೆ ಕೃಷಿ ಕಾನೂನುಗಳಿಂದಾಗುವ ಪ್ರಯೋಜನಗಳ ಬಗ್ಗೆ ಸುದೀರ್ಘವಾಗಿ ಹೇಳಿದ್ದಾರೆ.
“ರೈತರ ಪ್ರತಿಭಟನೆಯನ್ನು ಕೆಲವು ರಾಜಕೀಯ ಹಿತಾಸಕ್ತಿಯ ಜನರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಸಾಗಿದೆ. ರಾಜಕೀಯ ಸಿದ್ದಾಂತವುಳ್ಳ ಕೆಲವು ಜನರು ಎಪಿಎಂಸಿ ಇಲ್ಲದಿರುವ ಕೇರಳ ಮತ್ತು ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯಿಂದ 70 ಲಕ್ಷ ರೈತರನ್ನು ವಂಚಿತರನ್ನಾಗಿ ಮಾಡಿರುವ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಮಾಡುತ್ತಿಲ್ಲ” ಎಂದು ಹೇಳಿದರು.
ಕೃಷಿ ಕಾನೂನುಗಳ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿರುವುದಕ್ಕಾಗಿ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.