ಹೊಸದಿಲ್ಲಿ : ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೈಬಿಡಲು ರಾಜ್ಯ ಸಭೆಯಲ್ಲಿ ಪ್ರತಿಪಕ್ಷಗಳು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಬದಲಾಗಿ ಹೊಸ ಕಾನೂನನ್ನು ಜಾರಿಗೆ ತರುವಂತೆ ಶಿವಸೇನೆ, ಎಸ್ ಎಡಿ, ಎನ್ ಸಿಪಿ, ಸಮಾಜವಾದಿ ಪಕ್ಷ ಮತ್ತು ಎಡಪಕ್ಷಗಳಂತಹ ವಿವಿಧ ಪಕ್ಷಗಳು ಇಂದು ರಾಜ್ಯಸಭೆಯಲ್ಲಿ ಸರಕಾರವನ್ನು ಒತ್ತಾಯಿಸಿವೆ.
ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರನ್ನು ದೇಶ ದ್ರೋಹಿಗಳು ಎಂದು ಬಿಂಬಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ, ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಸರ್ಕಾರದ ಉದ್ದೇಶ ಸರಿಯಾಗಿಲ್ಲ ಎಂದು ಆರೋಪಿಸಿದ ಬಿಎಸ್ ಪಿ ಸದಸ್ಯ ಸತೀಶ್ ಚಂದ್ರ ಮಿಶ್ರಾ, ಕೂಡಲೇ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಪ್ರಧಾನ ಮಂತ್ರಿ ಮಧ್ಯಪ್ರವೇಶಿಸಿ ರೈತರ ಬೇಡಿಕೆಗಳನ್ನು ಆಲಿಸಬೇಕೆಂದು ಎಸ್ ಎಡಿ ಮುಖಂಡ ಸುಖ್ ದೇವ್ ಸಿಂಗ್ ದಿಂಡ್ಸಾ ಆಗ್ರಹಿಸಿದ್ದಾರೆ. ರೈತರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕೆಂದು ಅಕಾಲಿ ದಳ ಸದಸ್ಯರು ಒತ್ತಾಯಿಸಿದ್ದಾರೆ.
ಜನವರಿ 26 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎರಡು ತಿಂಗಳೊಳಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ಸ್ಥಾಪಿಸಬೇಕೆಂದು ಕಾಂಗ್ರೆಸ್ ಮುಖಂಡ ಪ್ರತಾಪ್ ಸಿಂಗ್ ಬಾಜ್ವಾ ಒತ್ತಾಯಿಸಿದ್ದಾರೆ. ಇದಕ್ಕೂ ಮುನ್ನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಪಿಐ ಸದಸ್ಯ ಬಿನೊಯ್ ವಿಶ್ವಾಂ, ಸತ್ಯ ಹೇಳುವವರನ್ನು ದೇಶದ್ರೋಹಿಗಳು ಅಥವಾ ರಾಷ್ಟ್ರ ವಿರೋಧಿಗಳೆಂದು ಚಿತ್ರೀಕರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.