ಮಂಗಳೂರು : ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ದೇವಸ್ಥಾನದ ಆಭರಣಗಳಲ್ಲಿ ಅವ್ಯವಹಾರ ನಡೆಸಿದ ಆರೋಪ ಕೇಳಿಬಂದಿದೆ. ಸುಬ್ರಹ್ಮಣ್ಯ ನಿವಾಸಿಯಾದ ಶ್ರೀನಾಥ್ ಟಿ.ಎಸ್. ಅವರು ಈ ಸಂಬಂಧ ಮಂಗಳೂರು ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಅಧೀಕ್ಷರಲ್ಲಿ ದೂರು ದಾಖಲಿಸಿ, ತನಿಖೆಗೆ ಮನವಿ ಮಾಡಿದ್ದಾರೆ.
ದೇವಾಲಯದ ಆಡಳಿತಾಧಿಕಾರಿ ಶ್ರೀಮತಿ ರೂಪಾ ಎಂ.ಜೆ. ಹಾಗೂ ದೇಗುಲದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ವಿರುದ್ಧ ತನಿಖೆಗೆ ಒತ್ತಾಯಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನದ ಅಧಿಕೃತ ದಾಖಲಾತಿ ಪುಸ್ತಕದಲ್ಲಿ ದಾಖಲಾಗಿರುವ ಕೋಟ್ಯಂತರ ರೂ. ಬೆಲೆ ಬಾಳುವ ವಜ್ರದ ಕಂಠಿಹಾರ, ಆಭರಣಗಳು, ದೇವರ ಫೋಟೊ, ಬೆಳ್ಳಿಯ ಒಡವೆಗಳು, ಪುರಾತನ ಕಾಲದ ವಿಗ್ರಹಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ದೇವಾಲಯದ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ಅವರಿಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರೂ, ಯಾವುದೇ ಮಾಹಿತಿ ದೊರಕಿಲ್ಲ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ನಿರ್ದೇಶಕರಾಗಿರುವು ಶ್ರೀನಾಥ್ ಟಿ.ಎಸ್. ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ್ದರೂ, ಆಡಳಿತಾಧಿಕಾರಿಯಾಗಲೀ, ಕಾರ್ಯ ನಿರ್ವಹಣಾಧಿಕಾರಿಯಾಗಲೀ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ತನಿಖೆಗೆ ಒತ್ತಾಯಿಸಲಾಗಿದೆ.