ಉಡುಪಿ : ಪ್ರಾಣಿ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಶಂಕಿಸಿ ಮಲೆಕುಡಿಯ ವ್ಯಕ್ತಿಯೊಬ್ಬರ ಮೇಲೆ ಬಜರಂಗ ದಳದ ಕಾರ್ಯಕರ್ತರು ಪೊಲೀಸರ ಎದುರೇ ಹಲ್ಲೆ ನಡೆಸಿದುದಲ್ಲದೆ, ಜಾತಿ ನಿಂದನೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದುವಿನ ಜಂಗೊಟ್ಟು ಕಾಲೋನಿಯ ಸೀತಾರಾಮ ಮಲೆಕುಡಿಯ ಎಂಬವರ ಮೇಲೆ ಈ ದಾಳಿ ನಡೆದಿದೆ.
ಜು.22ರಂದು ಸಂಜೆ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಆಡು ಖರೀದಿಸಲೆಂದು ಅಬ್ದುಲ್ ರೆಹಮಾನ್ ಎಂಬವರು ಸೀತಾರಾಮ ಅವರ ಮನೆಗೆ ಆಗಮಿಸಿದ್ದರು. ಇದನ್ನು ತಪ್ಪಾಗಿ ತಿಳಿದ ಬಜರಂಗ ದಳದ ಕಾರ್ಯಕರ್ತರು ಆಡು ಖರೀದಿಸಲು ಬಂದಿದ್ದವರ ಕಾರು ತಡೆಗಟ್ಟಿ ಹಲ್ಲೆ ನಡೆಸಿದ್ದಾರೆ. ಬಳಿಕ ಮತ್ತೆ ರಾತ್ರಿ 11ರ ವೇಳೆ ಸೀತಾರಾಮರ ಮನೆಗೆ ನುಗ್ಗಿದ ಬಜರಂಗ ದಳದ ಕಾರ್ಯಕರ್ತರು ಕಾರ್ಕಳ ಗ್ರಾಮಾಂತರ ಠಾಣೆ ಸಬ್ ಇನ್ಸ್ ಪೆಕ್ಟರ್ ಎದುರೇ ಅರೆನಗ್ನಗೊಳಿಸಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ದಾಳಿಕೋರರು ತನ್ನ ಜಾತಿ ನಿಂದನೆ ಮಾಡಿದ್ದಾರೆ ಎಂದೂ ಸೀತಾರಾಮ ಆರೋಪಿಸಿದ್ದಾರೆ.
ಘಟನೆಯ ಬಳಿಕ ಪೊಲೀಸರು ಸೀತಾರಾಮರನ್ನು ಠಾಣೆಗೆ ಕರೆದೊಯ್ದು ಪ್ರಾಣಿಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿ ಸೀತಾರಾಮ ಅವರು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ಈ ಕುರಿತು ದೂರು ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.