ಕಾರ್ಕಳ : ಬಜಗೋಳಿ ಚೆಕ್ ಪೋಸ್ಟಿನಲ್ಲಿ ಪೊಲೀಸರು ವಾಹನವನ್ನು ಅಡ್ಡಗಟ್ಟಿದ ಹಿನ್ನೆಲೆಯಲ್ಲಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಲಾಗದೆ ಮಹಿಳೆಯೋರ್ವಳು ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ನಲ್ಲೂರು ನಿವಾಸಿ ಮಂಜುಳಾ ಎಂದು ಗುರುತಿಸಲಾಗಿದೆ.
ತೀವ್ರ ಎದೆನೋವಿನಿಂದ ಬಳಲುತ್ತಿದ್ದ 33 ವರ್ಷದ ಮಂಜುಳಾ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಬಜಗೋಳಿ ಚೆಕ್ ಪೋಸ್ಟ್ ವಾಹನ ಅಡ್ಡಗಟ್ಟಿದ ಸಿಬ್ಬಂದಿ, ಖಾಸಗಿ ವಾಹನಕ್ಕೆ ಅನುಮತಿ ಇಲ್ಲದಿರುವುದರಿಂದ ಆಂಬ್ಯುಲನ್ಸ್ ಗೆ ಕರೆ ಮಾಡಿ ಎಂದು ಸೂಚಿಸಿದ್ದಾರೆ. ಎಷ್ಟೇ ಮನವಿ ಮಾಡಿಕೊಂಡರು ಆಸ್ಪತ್ರೆಗೆ ತೆರಳಲು ಅವಕಾಶ ಮಾಡಿಕೊಟ್ಟಿಲ್ಲ. ನಂತರ ಅಲ್ಲಿಂದ ಹಿಂದುರಿಗಿದ ಕಾರು ಬೇರೆ ಮಾರ್ಗದ (ಅಡ್ಡ ರಸ್ತೆ) ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಇತ್ತ ಆಸ್ಪತ್ರೆಯಲ್ಲಿಯೂ ವಿಳಂಬವಾಗಿದ್ದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾಳೆ. ಮಂಜುಳಾ ಸಾವಿಗೆ ಚೆಕ್ ಪೋಸ್ಟಿನಲ್ಲಿ ವಿಳಂಬವಾಗಿರುವುದೇ ಕಾರಣ ಎಂದು ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.